50,000 ವಲಸಿಗರ ಸ್ವೀಕಾರ: ಐರೋಪ್ಯ ಒಕ್ಕೂಟ
ಆಫ್ರಿಕ, ಮಧ್ಯಪ್ರಾಚ್ಯಗಳಿಂದ ಹರಿದು ಬರುತ್ತಿರುವ ನಿರಾಶ್ರಿತರು

ಬ್ರಸೆಲ್ಸ್ (ಬೆಲ್ಜಿಯಂ), ಸೆ. 28: ವಲಸಿಗರು ಸಣ್ಣ ದೋಣಿಗಳ ಮೂಲಕ ಅಪಾಯಕಾರಿ ರೀತಿಯಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟುವುದನ್ನು ತಪ್ಪಿಸುವುದಕ್ಕಾಗಿ ಆಫ್ರಿಕ, ಮಧ್ಯಪ್ರಾಚ್ಯ ಮತ್ತು ಟರ್ಕಿಗಳಿಂದ ಕನಿಷ್ಠ 50,000 ನಿರಾಶ್ರಿತರನ್ನು ನೇರವಾಗಿ ಸ್ವೀಕರಿಸುವ ಯೋಜನೆಯೊಂದನ್ನು ಐರೋಪ್ಯ ಒಕ್ಕೂಟ ಬುಧವಾರ ಅನಾವರಣಗೊಳಿಸಿದೆ.
ಒಕ್ಕೂಟದ ಮರುವಸತಿ ಕಾರ್ಯಕ್ರಮದ ಅನ್ವಯ ರೂಪಿಸಲಾಗಿರುವ ಈ ಕಾರ್ಯಕ್ರಮದ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳಿಗೆ ನಿರಾಶ್ರಿತರನ್ನು ಸೇರಿಸಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮವನ್ನು ವಲಸೆ ಸಮಸ್ಯೆಯು ಯುರೋಪ್ ಖಂಡವನ್ನು ಬಾಧಿಸಿದ 2015ರಲ್ಲೇ ರೂಪಿಸಲಾಗಿತ್ತು.
‘‘ಅಪಾಯಕಾರಿ ಸಮದ್ರ ಯಾನಗಳನ್ನು ಕೈಗೊಳ್ಳುವುದಕ್ಕೆ ನೈಜ ಪರ್ಯಾಯಗಳನ್ನು ನಾವು ಕಂಡುಕೊಳ್ಳಬೇಕಾದ ಅಗತ್ಯವಿದೆ’’ ಎಂದು ಬ್ರಸೆಲ್ಸ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐರೋಪ್ಯ ಒಕ್ಕೂಟ ವಲಸೆ ಕಮಿಶನರ್ ಡಿಮಿಟ್ರಿಸ್ ಅವ್ರಮೋಪಲಸ್ ಹೇಳಿದರು.
ಅಂತಾರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವ ಅತ್ಯಂತ ನಿಸ್ಸಹಾಯಕ ಪರಿಸ್ಥಿತಿಯಲ್ಲಿರುವ ಕನಿಷ್ಠ 50,000 ನಿರಾಶ್ರಿತರನ್ನು ಮುಂದಿನ ಎರಡು ವರ್ಷಗಳಲ್ಲಿ ಯುರೋಪ್‌ಗೆ ಕರೆತರುವ ಐರೋಪ್ಯ ಒಕ್ಕೂಟ ಪುನರ್ವಸತಿ ಯೋಜನೆಗೆ ತಾನು ಅನುಮೋದನೆ ನೀಡಿರುವುದಾಗಿ ಐರೋಪ್ಯ ಕಮಿಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಐರೋಪ್ಯ ಒಕ್ಕೂಟವು ಈ ಯೋಜನೆಯ ಪ್ರಕಾರ ಈಗಾಗಲೇ ಒಕ್ಕೂಟದ ಹೊರಗಿನ ದೇಶಗಳ, ಅದರಲ್ಲೂ ಮುಖ್ಯವಾಗಿ ಟರ್ಕಿ ಮತ್ತು ಜೋರ್ಡಾನ್‌ಗಳ ನಿರಾಶ್ರಿತ ಶಿಬಿರಗಳಲ್ಲಿರುವ 23,000 ವಲಸಿಗರಿಗೆ ಪುನರ್ವಸತಿ ಕಲ್ಪಿಸಿದೆ.
ಸಿರಿಯದಲ್ಲಿನ ಆಂತರಿಕ ಯುದ್ಧದ ಹಿನ್ನೆಲೆಯಲ್ಲಿ ಪಲಾಯನಗೈಯುತ್ತಿರುವ ಜನರು ಟರ್ಕಿ ಮತ್ತು ಜೋರ್ಡಾನ್‌ಗಳಲ್ಲಿ ಭಾರೀ ಸಂಖ್ಯೆಯಲ್ಲಿ ತುಂಬಿದ್ದಾರೆ.
ಈ ದೇಶಗಳಲ್ಲಿರುವ ನಿರಾಶ್ರಿತರ ಪುನರ್ವಸತಿ ಮುಂದುವರಿಯುತ್ತದೆ, ಜೊತೆಗೆ, ಲಿಬಿಯ, ಈಜಿಪ್ಟ್, ನೈಜರ್, ಸುಡಾನ್, ಚಾಡ್ ಮತ್ತು ಇತಿಯೋಪಿಯ ಮುಂತಾದ ಉತ್ತರ ಆಫ್ರಿಕ ಮತ್ತು ಹಾರ್ನ್ ಆಫ್ ಆಫ್ರಿಕ ವಲಯಗಳ ನಿರಾಶ್ರಿತರಿಗೂ ಆದ್ಯತೆ ನೀಡಲಾಗುತ್ತದೆ.







