ವಿಧಾನಸಭೆಗೆ ಏಕಾಂಗಿ ಸ್ಪರ್ಧೆ: ಎಚ್.ಡಿ.ದೇವೇಗೌಡ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಿಬಿಎಂಪಿಗೆ ಸೀಮಿತ

ಬೆಂಗಳೂರು, ಸೆ.28: ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಕೇವಲ ಬಿಬಿಎಂಪಿಗೆ ಸೀಮಿತವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಮೈತ್ರಿಗೆ ಸಮನ್ವಯ ಸಮಿತಿ ರಚಿಸಬೇಕು ಎಂಬ ಷರತ್ತಿನೊಂದಿಗೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಜೆಡಿಎಸ್ ಸದಸ್ಯರನ್ನು ಕಡೆಗಣಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಉಪ ಮೇಯರ್ ವಿಚಾರದಲ್ಲಿ ಗೊಂದಲ ಇರಲಿಲ್ಲ. ಕುಮಾರಸ್ವಾಮಿ ಅವರೇ ಈ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ. ಹಿಂದುಳಿದ ವರ್ಗದವರಿಗೆ ಈ ಬಾರಿ ಉಪಮೇಯರ್ ಸ್ಥಾನ ನೀಡಬೇಕೆಂಬ ಒತ್ತಡ ಇತ್ತು. ಹೀಗಾಗಿ ಉಪಮೇಯರ್ ಸ್ಥಾನಕ್ಕೆ ಮಹಿಳಾ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇದ್ದರೂ ಹಿಂದುಳಿದ ವರ್ಗಕ್ಕೆ ಈ ಸ್ಥಾನ ಕೊಡುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪದ್ಮಾವತಿ ನರಸಿಂಹಮೂರ್ತಿಯನ್ನು ಆಯ್ಕೆ ಮಾಡಲಾಯಿತು ಎಂದು ಹೇಳಿದರು.
ಮಾಜಿ ಸಚಿವ ಎ.ಕೃಷ್ಣಪ್ಪರ ಮಗಳು ಪೂರ್ಣಿಮಾ ಶ್ರೀನಿವಾಸ್‌ರನ್ನು ಜೆಡಿಎಸ್‌ನ ರಾಜ್ಯಾಧ್ಯಕ್ಷೆಯನ್ನಾಗಿ ಮಾಡಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಆರು ತಿಂಗಳವರೆಗೆ ಆ ಸ್ಥಾನವನ್ನು ಖಾಲಿ ಬಿಡಲಾಗಿತ್ತು. ಆದರೆ, ಅವರು ಬಿಜೆಪಿಗೆ ಸೇರ್ಪಡೆಯಾದರು ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ತೊರೆದ ಬಳಿಕ ಹಿಂದುಳಿದ ಎಲ್ಲ ಸಮುದಾಯಗಳನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಅದರ ಭಾಗವಾಗಿ ಎ.ಕೃಷ್ಣಪ್ಪರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈಗ ಪದ್ಮಾವತಿ ನರಸಿಂಹ ಮೂರ್ತಿಗೆ ಉಪಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದರು.







