ಟೆಕ್ಕಿಗೆ ಒಲಿದ ಮೇಯರ್ ಪಟ್ಟ
ಬೆಂಗಳೂರು, ಸೆ.28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 51ನೆ ಮೇಯರ್ ಆಗಿ ಸಂಪತ್‌ರಾಜ್ ಆಯ್ಕೆಯಾಗುವ ಮೂಲಕ ಟೆಕ್ಕಿಯೊಬ್ಬರಿಗೆ ಬೆಂಗಳೂರಿನ ಪ್ರಥಮ ಪ್ರಜೆ ಆಗುವ ಅವಕಾಶ ಸಿಕ್ಕಿದೆ.
ದೇವರಜೀವನಹಳ್ಳಿ ವಾರ್ಡ್ ಕಾರ್ಪೊರೇಟರ್ ಆಗಿರುವ ಸಂಪತ್‌ರಾಜ್ ಎರಡು ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿರುವ ಸಂಪತ್, ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.
ಮೇಯರ್ ಸಂಪತ್‌ರಾಜ್ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ಗೆ ಆತ್ಮೀಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ಅವರ ಹೆಸರು ಮೊದಲ ಹಂತದಲಿತ್ತು. ಗುರುವಾರ ಬೆಳಗ್ಗೆ ನಡೆದ ಚುನಾವಣೆಯಲ್ಲಿ ಸುಲಭವಾಗಿ ಗೆಲುವನ್ನು ಸಾಧಿಸುವ ಮೂಲಕ 2018, ಸೆ.28ರವರೆಗೆ ಬೆಂಗಳೂರಿನ ಪ್ರಥಮ ಪ್ರಜೆಯಾಗಲಿದ್ದಾರೆ.
ಎನ್‌ಎಸ್‌ಯುಐನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು, ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ಜಾತ್ಯಾತೀತ ಮನೋಭಾವನೆ, ದೇಶ ಪ್ರೇಮದ ಕುರಿತು ಅರಿವು ಮೂಡಿಸುತ್ತಾ ಬಂದಿದ್ದಾರೆ. ಇದರೊಂದಿಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೆಚ್ಚಿನ ತಿಳಿವಳಿಕೆ ಹೊಂದಿದ್ದು, ಉದ್ಯಮಿಗಳೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಬಿಬಿಎಂಪಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.





