ಅ.1ರಂದು ಹಿರಿಯರ ವಾಕಥಾನ್
ಬೆಂಗಳೂರು, ಸೆ.28: ಹೆಲ್ಪೇಜ್ ಇಂಡಿಯಾ ಮತ್ತು ರೋಟರಿ ದಕ್ಷಿಣ ವಲಯದ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಹಿರಿಯರ ವಾಕಥಾನ್ ಅಕ್ಟೋಬರ್ 1ರಂದು ಬೆಳಗ್ಗೆ 7-30ಕ್ಕೆ ನಗರದ ಬಸವನಗುಡಿ ನ್ಯಾಷನಲ್ ಕಾಲೇಜ್‌ನಿಂದ ಏರ್ಪಡಿಸಲಾಗಿದೆ.
ಗುರುವಾರ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೆಲ್ಪೇಜ್ ಇಂಡಿಯಾದ ರಾಜ್ಯ ಮುಖ್ಯಸ್ಥೆ ರೇಖಾ ಮೂರ್ತಿ ಅವರು, ಸಮಾಜದಿಂದ ಮತ್ತು ಕುಟುಂಬಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಹಿರಿಯರ ಪರ ಧ್ವನಿ ಎತ್ತಲು ಈ ವಾಕಥಾನ್ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನ್ಯಾಷನಲ್ ಕಾಲೇಜಿನಿಂದ ಹಿರಿಯರ ವಾಕಥಾನ್ ಆರಂಭಗೊಂಡು, ಲಾಲ್‌ಬಾಗ್ ವೆಸ್ಟ್ ಗೇಟ್, ವಾಡಿಯಾ ರಸ್ತೆ ಮೂಲಕ ಸುಮಾರು 2 ಕಿಮೀ ನಡೆಯಲಿದೆ. ಈ ವಾಕಥಾನ್ ಮತ್ತೆ ಕಾಲೇಜ್ ಆವರಣಕ್ಕೆ ಮರಳಲಿದ್ದು ಅಲ್ಲಿ ಸಮಾರೋಪ ನಡೆಯಲಿದೆ. ಇದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ ಅವರು ಸರಕಾರ ಸೇರಿ ಸ್ವಯಂ ಸೇವಾ ಸಂಸ್ಥೆಗಳಿಂದ ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸಲಿದ್ದಾರೆ ಎಂದರು.
ರೋಟರಿಯ ಅಧ್ಯಕ್ಷ ಡಾ.ರಾಜಶೇಖರ ಶೆಟ್ಟಿ ಮಾತನಾಡಿ, ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮದ ಬಗ್ಗೆಯೂ ಈ ಸಂರ್ಭದಲ್ಲಿ ತಿಳಿಸಲಾಗುತ್ತಿದೆ. ಇದು ಉಚಿತ ಪ್ರವೇಶದ ವಾಕಥಾನ್ ಆಗಿದ್ದು, ಇದರಲ್ಲಿ ಸುಮಾರು 700 ಜನ ಹಿರಿಯ ನಾಗರಿಕರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಆಸಕ್ತರು ಮಾಹಿತಿಗಾಗಿ 9980355166 ಸಂಪರ್ಕಿಸಬಹುದು ಎಂದು ಹೇಳಿದರು.







