ಅ.3ರಂದು ರಾಜಭವನ ಮುತ್ತಿಗೆ: ವಾಟಾಳ್ ನಾಗರಾಜ್
ಗೋವಾ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ

ಬೆಂಗಳೂರು, ಸೆ.28: ಗೋವಾದ ಬೈನಾ ಬೀಚ್‌ನಲ್ಲಿ ಕನ್ನಡಿಗರ ಕುಟುಂಬಗಳ ಒಕ್ಕಲೆಬ್ಬಿಸುವ ಕ್ರಮ ಖಂಡನೀಯವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದ ಗಮನ ಸೆಳೆಯಲು ಅ.3ರಂದು ರಾಜ ಭವನದ ಮೇಲೆ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಗುರುವಾರ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೋವಾದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಪದೇ ಪದೇ ನಡೆಯುತ್ತಿದೆ. ಆದರೂ, ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದ ಸಂಸದರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಕೇವಲ ಗೋವಾ ವಿಷಯದಲ್ಲಿ ಮಾತ್ರವಲ್ಲದೇ, ಮಹಾದಾಯಿ, ಕಾವೇರಿ ವಿಚಾರದಲ್ಲಿಯೂ ಮೌನವಾಗಿದ್ದಾರೆ. ಒಂದು ರೀತಿಯಲ್ಲಿ ರಾಜ್ಯದ ಸಂಸದರು ಉತ್ಸವ ಮೂರ್ತಿಗಳಾಗಿದ್ದಾರೆ ಎಂದು ಕಿಡಿಕಾರಿದರು.
ಗೋವಾ ಸರಕಾರದ ನಡೆಯನ್ನು ಖಂಡಿಸಿ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಲು ಮೊದಲ ಹಂತವಾಗಿ ಅ.3ರಂದು ರಾಜಭವನ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ. ಕನ್ನಡಪ ಪರ ಸಂಘಟನೆಗಳು ನಮ್ಮಿಂದಿಗೆ ಕೈಜೋಡಿಸಲಿವೆ. ರಾಜಭವನ ಮುತ್ತಿಗೆಗೂ ಸರಕಾರಗಳು ಬಗ್ಗದಿದ್ದರೆ ರಾಜ್ಯದಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಬಳಿಕವೂ ಕನ್ನಡಿಗರ ರಕ್ಷಣೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಗೋವಾದಲ್ಲಿ ಕನ್ನಡ ಒಕ್ಕೂಟದ ಪದಾಧಿಕಾರಿಗಳು ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಕನ್ನಡಿಗರ ಮನೆಗಳನ್ನು ತೆರವುಗೊಳಿಸಿ ಬೀದಿಗೆ ತಳ್ಳಿ ಮೂರು ದಿನಗಳಾದರೂ ಕೇಂದ್ರ ಸರಕಾರವು ಮೌನವಾಗಿದೆ. ಹೀಗಾಗಿ ರಾಜ್ಯ ಸರಕಾರವು ತಕ್ಷಣ ಎಚ್ಚೆತ್ತು ಸಚಿವರೊಬ್ಬರನ್ನು ಗೋವಾಗೆ ಕಳುಹಿಸಬೇಕು. ಅಲ್ಲದೇ, ಬೀದಿಪಾಲಾಗಿರುವ ಕನ್ನಡಿಗರ ಜೀವನ ನಡೆಸಲು ಅನುಕೂಲಕ್ಕಾಗಿ ಎರಡು ಕೋಟಿ ರೂ. ಕಳುಹಿಸಿಕೊಡಬೇಕು. ಈ ಮೂಲಕ ಗೋವಾದ ಕನ್ನಡಿಗರಿಗೆ ರಾಜ್ಯ ಸರಕಾರವು ಸಹಾಯ ಹಸ್ತ ಚಾಚಬೇಕು ಎಂದು ಆಗ್ರಹಿಸಿದ ಅವರು, ಗೋವಾ ಸರಕಾರವು ಕೇಂದ್ರದ ಯಾವುದೇ ಮಾತುಗಳನ್ನು ಕೇಳುತ್ತಿಲ್ಲ. ಕೇಂದ್ರದ ಮಾತು ಕೇಳುವುದಿಲ್ಲ ಎಂದಾದರೆ ಗೋವಾ ಸರಕಾರವನ್ನು ವಜಾಗೊಳಿಸಬೇಕು. ಕೇಂದ್ರ ಗೃಹ ಸಚಿವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಾದಾಯಿ ಸೇರಿದಂತೆ ರಾಜ್ಯದ ವಿಚಾರಕ್ಕೆ ಸಂಬಂಧಪಟ್ಟಂತಹ ವಿಷಯಗಳಲ್ಲಿ ಗೋವಾ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರಕಾರ ಮಧ್ಯ ಪ್ರವೇಶಿಸದಿದ್ದರೆ ಗೋವಾ ಸರಕಾರದ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ. ಗೋವಾದಲ್ಲಿನ ಬೆಳವಣಿಗೆಯು ಅಪಾಯಕಾರಿಯಾಗಿದ್ದು, ಒಕ್ಕೂಟದ ವ್ಯವಸ್ಥೆಯಲ್ಲಿ ಸಹಬಾಳ್ವೆ ಅತ್ಯಗತ್ಯವಾಗಿರುತ್ತದೆ. ಗೋವಾದಲ್ಲಿನ ಘಟನೆಯನ್ನು ಕೇಂದ್ರ ಸರಕಾರವು ಲಘುವಾಗಿ ಪರಿಗಣಿಸಬಾರದು. ಗಂಭೀರವಾಗಿ ಪರಿಗಣಿಸಿ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡಪರ ಪರ ಹೋರಾಟಗಾರ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







