ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣ: ವಿ.ವಿ.ರಾವ್

ಮಂಗಳೂರು, ಸೆ. 28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆ ಹಿನ್ನೆಲೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೊಸ ಆಗಮನ ಟರ್ಮಿನಲ್ ಕಟ್ಟಡ ನಿರ್ಮಿಸಲಾಗುವುದು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೊಸ ಟರ್ಮಿನಲ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಈಗ ಇರುವ ನಿರ್ಗಮನ ಕಟ್ಟಡಕ್ಕೆ ಹೊಂದಿಕೊಂಡೇ ನೂತನ ಕಟ್ಟಡ ನಿರ್ಮಾಣವಾಗಲಿದೆ. ಇದೀಗ ಸುಮಾರು 8 ಸಾವಿರ ಚ.ಮೀ. ವಿಸ್ತೀರ್ಣದ ಆಗಮನ ಕಟ್ಟಡವಿದೆ. ನೂತನ ಕಟ್ಟಡವು 9 ಸಾವಿರ ಚ.ಮೀ. ವಿಸ್ತೀರ್ಣ ಹೊಂದಲಿದೆ. ಈ ಕಟ್ಟಡವನ್ನು ವಿದೇಶಿ ಪ್ರಯಾಣಿಕರ ಆಗಮನಕ್ಕಾಗಿಯೇ ಮೀಸಲಿಡಲಾಗುತ್ತದೆ. ಇದರಲ್ಲಿ ಎರಡು ಪ್ರತ್ಯೇಕ ಕನ್ವೇಯರ್ ಬೆಲ್ಟ್ ಕೂಡಾ ನಿರ್ಮಾಣವಾಗಲಿದೆ ಎಂದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗ ದಿನಂಪ್ರತಿ 7,500 ಮಂದಿ ಪ್ರಯಾಣಿಕರ ನಿರ್ವಹಣೆಯಾಗುತ್ತಿದೆ. ಇದರಲ್ಲಿ ಶೇ.60ರಷ್ಟು ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಮುಂದೆ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿರುವುದರಿಂದ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ ಅನಿವಾರ್ಯ ಎಂದು ವಿ.ವಿ.ರಾವ್ ನುಡಿದರು.
ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಬಗ್ಗೆ ಬೇಡಿಕೆ ಇದೆ. ಸುಮಾರು 4 ಸಾವಿರ ಕೋ.ರೂ. ಇದಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ವಿನಿಯೋಗಿಸಿ ಯೋಜನೆ ಕಾರ್ಯಗತಗೊಳಿಸಿದರೆ ಎಷ್ಟರ ಮಟ್ಟಿಗೆ ಉಪಯೋಗವಾಗಲಿದೆ ಎಂಬುದು ಕೂಡ ಮುಖ್ಯವಾಗಲಿದೆ. ಇನ್ನೂ 2 ಸಾವಿರ ಮೀಟರ್ ರನ್ ವೇ ವಿಸ್ತರಣೆ ಮಾಡಿದರೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಕೊಚ್ಚಿನ್ ವಿಮಾನ ನಿಲ್ದಾಣದ ರನ್ ವೇ ಸಾಕಷ್ಟು ವಿಸ್ತರಣೆಯಿದ್ದರೂ ಅಲ್ಲಿ ವಿದೇಶಗಳ ಬೆರಳೆಣಿಕೆಯ ಬೃಹತ್ ವಿಮಾನಗಳು ಮಾತ್ರ ಕಾರ್ಯಾಚರಿಸುತ್ತಿವೆ ಎಂದು ವಿ.ವಿ.ರಾವ್ ನುಡಿದರು.
ಮಂಗಳೂರು ವಿಮಾನ ನಿಲ್ದಾಣದ ವ್ಯವಹಾರದಲ್ಲಿ ಭಾರೀ ಪ್ರಗತಿ ಕಾಣಿಸಿವೆ. ಕಾರ್ಗೋ ವ್ಯವಹಾರದಲ್ಲೂ ಭಾರೀ ಏರಿಕೆಯಾಗಿದೆ. ವಿಮಾನ ನಿಲ್ದಾಣದಲ್ಲಿ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ ಎಂದ ರಾವ್, ಕಣ್ಣೂರು ವಿಮಾನ ನಿಲ್ದಾಣದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಧಕ್ಕೆ ಇಲ್ಲ. ಅದೇನಿದ್ದರೂ ಕಲ್ಲಿಕೋಟೆ ವಿಮನ ನಿಲ್ದಾಣಕ್ಕೆ ಹೊಡೆತ ಬೀಳಬಹುದು ಎಂದರು.







