ವಿಮಾನಗಳ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಸಚಿವ ರೈ ಮನವಿ

ಮಂಗಳೂರು, ಸೆ. 28: ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವ ವಿಮಾನಗಳ ಸುರಕ್ಷತೆ ಹಾಗೂ ವಿಮಾನ ನಿಲ್ದಾಣದ ಭದ್ರತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವ ಪಿ. ಅಶೋಕ್ ಗಜಪತಿ ರಾಜು ಅವರಿಗೆ ಪತ್ರ ಬರೆದಿರುವ ಉಸ್ತುವಾರಿ ಸಚಿವರು, ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದಿಂದ 173 ಪ್ರಯಾಣಿಕರನ್ನು ಹೊತ್ತೊಯ್ದು ದೋಹಾಕ್ಕೆ ಹೊರಟಿದ್ದ ಏರ್‌ಇಂಡಿಯಾ ವಿಮಾನ ಇಂಜಿನ್ ವೈಫಲ್ಯದಿಂದ ಆಕಾಶದಲ್ಲೇ ಅಪಾಯದ ಸ್ಥಿತಿಗೆ ತಲುಪಿತ್ತು. ಅದೇ ರೀತಿ 185 ಪ್ರಯಾಣಿಕರನ್ನು ಕರೆತರುತ್ತಿದ್ದ ಲ್ಯಾಂಡಿಂಗ್ ಆಗುತ್ತಿದ್ದ ಏರ್‌ಇಂಡಿಯಾ ವಿಮಾನವೂ ರನ್‌ವೇಯಲ್ಲಿ ಸ್ಕಿಡ್ ಆಗಿತ್ತು. 2010ರಲ್ಲಿ ಏರ್‌ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 160 ಪ್ರಯಾಣಿಕರು ಸಾವನ್ನಪ್ಪಿದ್ದರು.ಇದರಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುತ್ತಿರುವ ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಉಸ್ತುವಾರಿ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಮಂಗಳೂರಿನಿಂದ ವಿದೇಶಗಳಿಗೆ ಹೊರಡುವ ಸಂಚಾರಕ್ಕೆ ಹೊಸ ವಿಮಾನಗಳನ್ನು ಒದಗಿಸುವಂತೆಯೂ ಸಚಿವ ರಮಾನಾಥ ರೈ ಮನವಿ ಮಾಡಿದ್ದಾರೆ.





