ಬಂಗಾಳಕೊಲ್ಲಿಯಲ್ಲಿ ಮುಳುಗಿದ 130 ರೊಹಿಂಗ್ಯಾ ನಿರಾಶ್ರಿತರಿದ್ದ ಬೋಟ್
ಮಕ್ಕಳು ಸೇರಿ 13 ಮಂದಿ ಮೃತ್ಯು; ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಫೈಲ್ ಚಿತ್ರ
ಜಿನೆವಾ, ಸೆ.28: ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದ 130 ರೊಹಿಂಗ್ಯಾ ನಿರಾಶ್ರಿತರಿದ್ದ ಬೋಟೊಂದು ಬಂಗಾಳ ಕೊಲ್ಲಿಯಲ್ಲಿ ಮುಳುಗಡೆಯಾಗಿದೆ ಎಂದು ನಿರಾಶ್ರಿತರ ಅಂತಾರಾಷ್ಟ್ರೀಯ ಸಂಸ್ಥೆ ಗುರುವಾರ ಹೇಳಿದೆ.
13 ಮೃತದೇಹಗಳು ಪತ್ತೆಯಾಗಿದೆ. ಇದರಲ್ಲಿ 8 ಮಕ್ಕಳಿದ್ದಾರೆ ಎಂದು ನಿರಾಶ್ರಿತರ ಅಂತಾರಾಷ್ಟ್ರೀಯ ಸಂಸ್ಥೆಯ ಬಾಂಗ್ಲಾದೇಶದ ಕಚೇರಿ ಟ್ವೀಟ್ ಮಾಡಿದೆ.
ತೀರಕ್ಕೆ ಸಮೀಪದಲ್ಲಿದ್ದಾಗ ಮುಳುಗಿದ ವಸ್ತುವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೋಟು ಮುಳುಗಿದೆ. ನಂತರ ಅದು ಎರಡು ಭಾಗಗಳಾಗಿ ಕೊಚ್ಚಿಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹಾಗು ಅವಘಡದಿಂದ ಪಾರಾದವರು ತಿಳಿಸಿದ್ದಾರೆ.
“ನನ್ನ ಕಣ್ಣ ಮುಂದೆಯೇ ಅವರು ಕೊಚ್ಚಿಕೊಂಡು ಹೋದರು” ಎಂದು ಸ್ಥಳೀಯ ನಿವಾಸಿ ಮುಹಮ್ಮದ್ ಸೋಹೆಲ್ ಎಂಬವರು ಹೇಳಿದ್ದಾರೆ.
“ಮ್ಯಾನ್ಮಾರ್ ನ ಗ್ರಾಮವೊಂದರಿಂದ ಬುಧವಾರ ನಾನು, ಪತ್ನಿ ಹಾಗೂ ಮಕ್ಕಳು ಹೊರಟಿದ್ದೆವು. ಈ ದುರಂತದಲ್ಲಿ ಪತ್ನಿ ಹಾಗು ಮಗುವನ್ನು ಕಳೆದುಕೊಂಡೆ” ಎಂದು ಬದುಕುಳಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.





