ಗೋವಾ ಕನ್ನಡಿಗರ ಬೀದಿ ಪಾಲಿಗೆ ಖಂಡನೆ

ಬೆಂಗಳೂರು, ಸೆ.28:ಗೋವಾದ ಬೈನಾ ಬೀಚ್‌ನಲ್ಲಿ ಕನ್ನಡಿಗರನ್ನು ಬೀದಿಪಾಲು ಮಾಡಿರುವುದನ್ನು ಖಂಡಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಕಾರ್ಮಿಕರ ವೇದಿಕೆ ಸೇರಿದಂತೆ ನಾನಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಗೋವಾ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗೋವಾ ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎ.ದೇವರಾಜ್, ಬೈನಾ ಬೀಚ್‌ನಲ್ಲಿ ಎರಡು ದೇವಸ್ಥಾನಗಳು ಸೇರಿದಂತೆ ಹಲವು ಮನೆಗಳನ್ನು ತೆರವುಗೊಳಿಸಲಾಗಿದೆ. ಹಲವು ವರ್ಷಗಳಿಂದ ಬೈನಾ ಬೀಚ್‌ನಲ್ಲಿ ಕನ್ನಡಿಗರು ಮನೆ ನಿರ್ಮಿಸಿಕೊಂಡು ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಈಗ ಏಕಾಏಕಿ ಮನೆಗಳನ್ನು ಕೆಡವಿ ಹಾಕಲಾಗಿದೆ. ಅವರೆಲ್ಲ ಬೀದಿ ಪಾಲಾಗಿದ್ದಾರೆ ಎಂದು ಹೇಳಿದರು.
ಕನ್ನಡಿಗರ ಮೇಲೆ ಮೇಲಿಂದ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತಿದ್ದರೂ ಗೋವಾ ಸರಕಾರ ಏನು ನಡೆದಿಲ್ಲ ಎನ್ನುವಂತೆ ವರ್ತಿಸುತ್ತಿದೆ. ಇಂದು ಅಂತರ್ ರಾಜ್ಯಗಳ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ. ಗೋವಾದಲ್ಲಿ ವಾಸಿಸುವ ಮಹಿಳೆ ಮತ್ತು ಮಕ್ಕಳಿಗೆ ಆತಂಕದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ, ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಸಂಚಾಲಕರಾದ ಪವನ್, ಪುಷ್ಪಸ್ವಾಮಿ, ಸುಮಾ ಶಿಲ್ಪಾ, ಅನಿಲ್,ಲಲಿತಾಮ್ಮ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.







