ಹಿರಿಯ ನಾಗರಿಕರ ಪ್ರಶಸ್ತಿ ಮೊತ್ತ 1ಲಕ್ಷ ರೂ.ಗೆ ಹೆಚ್ಚಳ: ಸಚಿವೆ ಉಮಾಶ್ರೀ

ಬೆಂಗಳೂರು, ಸೆ. 28: ವಿಶ್ವ ಹಿರಿಯ ನಾಗರಿಕರ ದಿನಾಚರಣೆ (ಅ.1ರ) ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಹಿರಿಯ ನಾಗರಿಕರಿಗೆ ರಾಜ್ಯ ಸರಕಾರದಿಂದ ನೀಡುವ ಪ್ರಶಸ್ತಿ ಮೊತ್ತವನ್ನು 10 ಸಾವಿರ ರೂ.ನಿಂದ 1ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವೆ ಉಮಾಶ್ರೀ ಮಾಹಿತಿ ನೀಡಿದ್ದಾರೆ.
ಅ.1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ-ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಏರ್ಪಡಿಸಿರುವ ಸಮಾರಂಭದಲ್ಲಿ ವಿಶಿಷ್ಟ ಸಾಧನೆಗೈದ ಆರು ಮಂದಿ ಹಿರಿಯ ನಾಗರಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಹೇಳಿದ್ದಾರೆ.
ದಾನಯ್ಯ ಸೇರಿ ಆರು ಮಂದಿಗೆ ಪ್ರಶಸ್ತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಸಂಸ್ಥೆ, ಭದ್ರಾವತಿಯ ಎಚ್.ರಾಮೇಗೌಡ (ಕ್ರೀಡೆ), ಬೀದರ್‌ನ ಲಕ್ಷ್ಮೀ ಬಾಯಿ ಕಿಷನ್ ರಾವ್(ಕಲಾ ಕ್ಷೇತ್ರ), ಬಾಗಲಕೋಟೆಯ ದಾನಯ್ಯ ದುಂಡಯ್ಯ(ಸಮಾಜ ಸೇವೆ), ಗದಗದ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ(ಕಾನೂನು), ಕೊಡಗು ಜಿಲ್ಲೆಯ ಕೆ.ಎ.ನಾಗೇಶ್(ಸಾಹಿತ್ಯ) ಹಾಗೂ ಬೆಂಗಳೂರಿನ ಡಾ.ಬಿ.ಜಿ.ಸುಧಾ(ಶಿಕ್ಷಣ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಮಾಶ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







