ಮೂಡಲಗಿ ತಾಲೂಕು ಘೋಷಣೆಗೆ ಬಿಎಸ್‌ವೈ ಒತ್ತಾಯ

ಬೆಂಗಳೂರು, ಸೆ.28: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿಯನ್ನು ಹೊಸ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವ ಸರಕಾರದ ಕ್ರಮ ಸರಿಯಲ್ಲ. ಈ ಕೂಡಲೇ ಪಟ್ಟಿಯನ್ನು ಪರಿಷ್ಕರಿಸಿ ಮೂಡಲಗಿ ತಾಲೂಕು ಘೋಷಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ರಾಜ್ಯದ ಸಮರ್ಥ ಆಡಳಿತ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ 1973ರಲ್ಲಿ ನೇಮಿಸಿದ್ದ ವಾಸುದೇವರಾವ್ ಸಮಿತಿ, 1984ರಲ್ಲಿ ನೇಮಿಸಿದ್ದ ಟಿ.ಎಂ.ಹುಂಡೇಕರ್ ಸಮಿತಿ ಹಾಗೂ 1986ರಲ್ಲಿ ರಚಿಸಿದ್ದ ಪಿ.ಸಿ.ಗದ್ದೀಗೌಡರ್ ಸಮಿತಿಯು ಮಾಡಿದ್ದ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು 2013ರಲ್ಲಿ ಬಿಜೆಪಿ ಸರಕಾರ 43 ಹೊಸ ತಾಲೂಕುಗಳನ್ನು ರಚಿಸುವುದಾಗಿ ಘೋಷಿಸಿತ್ತು ಎಂದು ಹೇಳಿದ್ದಾರೆ.
ಹೊಸ ತಾಲೂಕುಗಳ ಪಟ್ಟಿಯಲ್ಲಿ ಮೂಡಲಗಿಯನ್ನು ಸೇರಿಸಲಾಗಿತ್ತು. ಆದರೆ, ಈಗ 4 ವರ್ಷಗಳಷ್ಟು ವಿಳಂಬದ ನಂತರ ಈಗಿನ ಸರಕಾರ ಘೋಷಿಸಿರುವ ಹೊಸ ತಾಲೂಕುಗಳ ಪಟ್ಟಿಯಲ್ಲಿ ಮೂಡಲಗಿಯನ್ನು ಕೈ ಬಿಟ್ಟಿರುವುದು ಆ ಭಾಗದ ಜನರ ಅಚ್ಚರಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮೂಡಲಗಿಯನ್ನು ತಾಲೂಕುಗಳ ಪಟ್ಟಿಯಿಂದ ಕೈ ಬಿಡಲು ರಾಜ್ಯ ಸರಕಾರ ಯಾವುದೇ ಕಾರಣವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮೂಡಲಗಿ ಪ್ರದೇಶದ ಜನರು ತಮಗೆ ಸರಕಾರದಿಂದ ಭಾರಿ ಅನ್ಯಾಯವಾಗಿದೆ ಎಂದು ಭಾವಿಸಿದ್ದಾರೆ. ಸ್ಥಳೀಯರು ಈಗಾಗಲೇ ಧರಣಿ ಸತ್ಯಾಗ್ರಹಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೂಡಲಗಿ ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಣೆಯಾಗಲು ಇರಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದೆ. 16 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ 42 ಗ್ರಾಮಗಳನ್ನು ಹೊಂದಿದ್ದು 1,34,914 ಜನಸಂಖ್ಯೆಯನ್ನು ಹೊಂದಿದೆ. ಈ ಕಾರಣಕ್ಕಾಗಿ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳು ಮೂಡಲಗಿಯನ್ನು ಹೊಸ ತಾಲೂಕು ಮಾಡುವಂತೆ ರಾಜ್ಯ ಸರಕಾರಕ್ಕೆ ಶಿಫಾರಸ್ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದರು ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣವೆ ಸ್ಥಳೀಯ ಜನರ ಆಶಯಗಳಿಗೆ ಸ್ಪಂದಿಸುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ. ಆದುದರಿಂದ, ಹೊಸ ತಾಲೂಕುಗಳ ಪಟ್ಟಿಯನ್ನು ಪರಿಷ್ಕರಿಸಿ ಮೂಡಲಗಿಯನ್ನು ಹೊಸ ತಾಲೂಕನ್ನಾಗಿ ಘೋಷಿಸಬೇಕೆಂದು ಯಡಿಯೂರಪ್ಪ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







