ಉದ್ಯಾನನಗರಿಯಲ್ಲಿ ಕೊಹ್ಲಿ ಪಡೆಗೆ ಸೋಲು
ನಾಲ್ಕನೆ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಒಲಿಯಿತು 21ರನ್‌ಗಳ ಜಯ

ಬೆಂಗಳೂರು, ಸೆ.28: ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 21 ರನ್‌ಗಳ ಸೋಲು ಅನುಭವಿಸಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 335 ರನ್‌ಗಳ ಸವಾಲನ್ನು ಪಡೆದ ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 313 ರನ್ ಗಳಿಸಿತು. ಅಜಿಂಕ್ಯ ರಹಾನೆ , ರೋಹಿತ್ ಶರ್ಮ, ಕೇದಾರ್ ಜಾಧವ್ ಅವರು ಅರ್ಧಶತಕಗಳ ಕೊಡುಗೆ ನೀಡುವ ಮೂಲಕ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ಆದರೆ ಆಸ್ಟ್ರೇಲಿಯದ ಆಟಗಾರರ ಸಂಘಟಿತ ಹೋರಾಟದ ಮೂಲಕ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿಕೊಂಡಿತು. ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್‌ಗೆ 18.2 ಓವರ್‌ಗಳಲ್ಲಿ 106 ರನ್ ಗಳಿಸುವ ಮೂಲಕ ಮೊದಲ ವಿಕೆಟ್‌ಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿದ್ದರು.
ಅಜಿಂಕ್ಯ ರಹಾನೆ 66 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 53 ರನ್ ಗಳಿಸಿ ಔಟಾದರು. ರೋಹಿತ್ ಶರ್ಮ ಮತ್ತೊಮ್ಮೆ ಶತಕದ ನಿರೀಕ್ಷೆ ಮೂಡಿಸಿದ್ದರು. ಅವರು 65 ರನ್ (55ಎ, 1 ಬೌ,5ಸಿ) ಗಳಿಸಿದ್ದಾಗ ಕೊಹ್ಲಿ ಜೊತೆ ಅನಗತ್ಯವಾಗಿ ರನ್ ಕದಿಯುವ ಯತ್ನದಲ್ಲಿ ರನೌಟಾದರು.
ವಿರಾಟ್ ಕೊಹ್ಲಿ 21 ರನ್ ಗಳಿಸಿ ಕೌಲ್ಟರ್ ನೀಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
4ನೆ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಮತ್ತು ಮನೀಷ್ ಪಾಂಡೆ 78 ರನ್‌ಗಳ ಜೊತೆಯಾಟ ನೀಡಿದರು. ಪಾಂಡ್ಯ 40 ಎಸೆತಗಳಲ್ಲಿ 41 ರನ್(1ಬೌ, 3ಸಿ) ಗಳಿಸಿ ಔಟಾದರು. ಬಳಿಕ ಕೇದಾರ್ ಜಾಧವ್ ಮತ್ತು ಮನೀಷ್ ಪಾಂಡೆ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿ 5ನೆ ವಿಕೆಟ್‌ಗೆ ಜೊತೆಯಾಟದಲ್ಲಿ 64 ರನ್ ಸೇರಿಸಿದರು.
ಕೇದಾರ್ ಜಾಧವ್ 67 ರನ್ (69ಎ, 7ಬೌ,1ಸಿ ) ಗಳಿಸಿದರು. ತವರಿನಲ್ಲಿ ಆಡಿದ ಪಾಂಡೆ 33ರನ್(25ಎ, 3ಬೌ,1ಸಿ ) ಗಳಿಸಿದರು. ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಆಗಮಿಸಿದರೂ ಅವರಿಗೆ ತಂಡವನ್ನು ಈ ಪಂದ್ಯದಲ್ಲಿ ರಕ್ಷಿಸಲು ಸಾಧ್ಯವಾಗಲಿಲ್ಲ. ಅವರು 13ರನ್(10ಎ, 1ಬೌ, 1ಸಿ) ಗಳಿಸಿದರು. ಅಕ್ಷರ್ ಪಟೇಲ್ 5 ರನ್ ಗಳಿಸಿದರು.







