ಸರಕಾರಕ್ಕೆ ಪರಿಷತ್ ಸದಸ್ಯ ರಮೇಶ್‌ಬಾಬು ಅಭಿನಂದನೆ
ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ
ಬೆಂಗಳೂರು, ಸೆ.28: ರಾಜ್ಯದ ಶಿಕ್ಷಕರ, ಉಪನ್ಯಾಸಕರ, ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ 13 ಜನ ವಿಧಾನಪರಿಷತ್ ಸದಸ್ಯರು ಪಕ್ಷಾತೀತವಾಗಿ ಹತ್ತು ದಿನ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿ ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.15 ಮತ್ತು 27ರಂದು ಅಧಿಕಾರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಶಿಕ್ಷಣ ಸಚಿವರೊಂದಿಗೆ ಪೂರ್ಣಮಟ್ಟದ ಸಭೆಗಳನ್ನು ನಡೆಸಿ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್, ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರವು ವಿಧಾನಪರಿಷತ್ ಸದಸ್ಯರೊಂದಿಗೆ 37 ವಿಷಯಗಳ ಕುರಿತು ಚರ್ಚಿಸಿದೆ. ನಮ್ಮ ಹಲವಾರು ಬೇಡಿಕೆಗಳನ್ನು ಜಾರಿಗೊಳಿಸಲು ಒಪ್ಪಿದ್ದು, ಈ ಸಂಬಂಧ ಸೂಕ್ತ ಆದೇಶಗಳನ್ನು ಹೊರಡಿಸಲು ವಿಧಾನಪರಿಷತ್ತಿನ ಸದಸ್ಯರೊಂದಿಗೆ ಶಿಕ್ಷಣ ಸಚಿವರು ಸಭೆ ನಡೆಸಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ಬಾಬು ಆಗ್ರಹಿಸಿದ್ದಾರೆ.
ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ತಾರತಮ್ಯವನ್ನು 6ನೆ ವೇತನ ಆಯೋಗದಲ್ಲಿ ಸರಿಪಡಿಸುವ ಭರವಸೆಯನ್ನು ರಾಜ್ಯ ಸರಕಾರ ನೀಡಿದೆ. ಇದಕ್ಕೆ ಪೂರಕವಾಗಿ ವೇತನ ಹೆಚ್ಚಳದ ಮಧ್ಯಂತರ ಆದೇಶವನ್ನು ನೀಡಲು 6ನೆ ವೇತನ ಆಯೋಗವನ್ನು ಅವರು ಕೋರಿದ್ದಾರೆ.
ಅನುದಾನಿತ ಮತ್ತು ಅನುದಾನ ರಹಿತ ಸಂಸ್ಥೆಗಳ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಯೂನಿವರ್ಸಲ್ ಆರೋಗ್ಯ ಯೋಜನೆ ಜಾರಿಗೊಳಿಸಲು ರಾಜ್ಯ ಸರಕಾರ ಒಪ್ಪಿದೆ. ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಕಾಲ ಕಾಲಕ್ಕೆ ಪದೋನ್ನತಿ ನೀಡುವ ವಿಚಾರ, ಭಡ್ತಿ ನೀಡುವ ವಿಚಾರ ಹಾಗೂ ನಿಗದಿತ ಅವಧಿಯ ಪದೋನ್ನತಿ ವಿಚಾರದಲ್ಲಿ ಸಕಾರಾತ್ಮಕವಾಗಿರುತ್ತದೆ ಎಂದು ರಮೇಶ್‌ಬಾಬು ಹೇಳಿದ್ದಾರೆ.
ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಅನುಪಾತವನ್ನು 1:70ಕ್ಕೆ ಕಡಿತಗೊಳಿಸಲು ಒಪ್ಪಿರುತ್ತದೆ. ವಿಶೇಷ ವಾರ್ಷಿಕ ಭಡ್ತಿಯನ್ನು ತತ್ಸಮಾನ ಹುದ್ದೆಗಳಿಗೂ ವಿಸ್ತರಿಸಲು ಆದೇಶ ಹೊರಡಿಸಲಾಗಿದೆ. 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು 2 ವರ್ಷಗಳ ಅವಧಿಗೆ ವಿಸ್ತರಿಸಲು ಒಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಯನ್ನು ಹಂತ ಹಂತವಾಗಿ ಭರ್ತಿ ಮಾಡಲು ಒಪ್ಪಿರುತ್ತದೆ. ಬಹುದಿನಗಳಿಂದ ಬಾಕಿ ಇದ್ದ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರಕಾರ ಒಪ್ಪಿದ್ದು, ಉಳಿದ ಸಮಸ್ಯೆಗಳನ್ನು ಪರಿಹರಿಸಲು ವಿಧಾನಪರಿಷತ್ತು ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಶಿಕ್ಷಕರ, ಉಪನ್ಯಾಸಕರ, ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಕ್ಷೇತ್ರದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕಾಗಿ ರಾಜ್ಯ ಸರಕಾರವನ್ನು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







