1.25 ಕೋಟಿ ಹೊಸ ಐಟಿ ರಿಟರ್ನ್ ಸಲ್ಲಿಕೆದಾರರಿಗಾಗಿ ಸರಕಾರದ ಜಾಲ

ಹೊಸದಿಲ್ಲಿ,ಸೆ.28: ಆದಾಯ ತೆರಿಗೆ ಜಾಲದಲ್ಲಿ ಹೆಚ್ಚೆಚ್ಚು ಜನರನ್ನು ಸೇರ್ಪಡೆ ಗೊಳಿಸುವ ಸರಕಾರದ ಯೋಜನೆಯ ಭಾಗವಾಗಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು, ಪ್ರಸಕ್ತ 2017-18ನೇ ಹಣಕಾಸು ವರ್ಷದಲ್ಲಿ 1.25 ಕೋಟಿ ಹೊಸ ರಿಟರ್ನ್ ಸಲ್ಲಿಕೆದಾರರನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಳ್ಳುವಂತೆ ಆದಾಯ ತೆರಿಗೆ ಇಲಾಖೆಗೆ ತಾಕೀತು ಮಾಡಿದೆ. ತೆರಿಗೆ ಬುನಾದಿಯನ್ನು ವಿಸ್ತರಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುವಂತೆ ಅದು ಸೂಚಿಸಿದೆ.
ಕಾನೂನಿನಡಿ ರಿಟರ್ನ್‌ಗಳನ್ನು ಸಲ್ಲಿಸಲು ಬದ್ಧವಾಗಿದ್ದರೂ ಹಿಂದಿನ ವರ್ಷಗಳಲ್ಲಿ ರಿಟರ್ನ್‌ಗಳನ್ನು ಸಲ್ಲಿಸಿರದ ವ್ಯಕ್ತಿಯನ್ನು ಹೊಸ ರಿಟರ್ನ್ ಸಲ್ಲಿಕೆದಾರ ಎಂದು ವ್ಯಾಖ್ಯಾನಿಸಲಾಗಿದೆ. ಸಿಬಿಡಿಟಿಯ ನಿರ್ದೇಶದಂತೆ ಆದಾಯ ತೆರಿಗೆ ಇಲಾಖೆಯು ಇಂತಹ 1.25 ಕೋಟಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವಂತೆ ಮಾಡಬೇಕಾಗಿದೆ.
ಅಧಿಕೃತ ದತ್ತಾಂಶಗಳಂತೆ 2016-17ರಲ್ಲಿ ಒಟ್ಟು 5.43 ಆದಾಯ ತೆರಿಗೆ ರಿಟರ್ನ್ ಗಳು ಸಲ್ಲಿಕೆಯಾಗಿದ್ದು, 2015-16ನೇ ಸಾಲಿಗೆ ಹೋಲಿಸಿದರೆ ಶೇ.17.3ರಷ್ಟು ಏರಿಕೆ ಕಂಡು ಬಂದಿತ್ತು. ಇದೇ ರೀತಿ 2016-17ನೇ ಸಾಲಿಗೆ 1.26 ಕೋಟಿ ಹೊಸ ತೆರಿಗೆದಾತರು ತೆರಿಗೆ ಜಾಲದಲ್ಲಿ ಸೇರ್ಪಡೆಗೊಂಡಿದ್ದರು.





