ಬೆಳ್ತಂಗಡಿ ಉಪವಲಯಾರಣ್ಯಾಧಿಕಾರಿಯಿಂದ ಹಲ್ಲೆ ಆರೋಪ: ದೂರು

ಬೆಳ್ತಂಗಡಿ, ಸೆ. 28: ಪುದುವೆಟ್ಟು ಗ್ರಾಮದ ಅರಣ್ಯದಿಂದ ಮರ ಕಳ್ಳತನವಾಗಿದೆ ಎಂದು ಆರೋಪಿಸಿ ಉಜಿರೆ ಉಪ ವಲಯಾರಣ್ಯಾಧಿಕಾರಿ ಕೀರ್ತನ್ ಎಂಬವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲ್ಲೆಗೆ ಒಳಗಾದ ಕಮಲ್ ದಾಸ್ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯನ್ನು ಖಂಡಿಸಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಕಚೇರಿಯ ಮುಂದೆ ಸಾರ್ವಜನಿಕರು ಗುರುವಾರ ಪ್ರತಿಭಟನೆ ನಡೆಸಿದರು.
ಪುದುವೆಟ್ಟು ಮೀಸಲು ಅರಣ್ಯದಿಂದ ಕೆಲ ದಿನಗಳ ಹಿಂದೆ ಮರಕಳ್ಳತನವಾಗಿತ್ತು ಎನ್ನಲಾಗಿದೆ. ಪುದುವೆಟ್ಟು ಅರಣ್ಯ ಧರ್ಮಸ್ಥಳ ಫಾರೆಸ್ಟರ್ ಅವರ ವ್ಯಾಪ್ತಿಗೆ ಬರುವ ಪ್ರದೇಶ ಇದಾಗಿದ್ದರೂ ಈ ವಿಚಾರವನ್ನು ಮುಂದಿಟ್ಟು ಉಜಿರೆಯ ಫಾರೆಸ್ಟರ್ ಕೀರ್ತನ್ ತನ್ನ ಕಾರ್ಯವ್ಯಾಪ್ತಿಗೆ ಬರದ ಪುದುವೆಟ್ಟಿಗೆ ಬಂದು ಮರ ಕೊಯ್ಯಲು ಇರುವುದಾಗಿ ಹೇಳಿ ಕಮಲ್ ದಾಸ್‌ನನ್ನು ಮನೆಯಿಂದ ಕರೆದೊಯ್ದಿದ್ದಾರೆ ಎನ್ನಲಾಗಿದೆ. ದಿನವಿಡೀ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಗೆ ಬಂದರೂ ಭಯಗೊಂಡ ಅವರಯ ತನ್ನ ಮೇಲಾಗಿರುವ ಹಲ್ಲೆಯ ಬಗ್ಗೆ ತಿಳಿಸಿರಲಿಲ್ಲ ಮನೆಯಲ್ಲಿಯೇ ಇದ್ದು ಇಂದು ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆತನ ಪತ್ನಿ ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.
ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ: ಯಾವುದೇ ಆರೋಪವಿಲ್ಲದೆ ಸಾಕ್ಷಿ ಆಧಾರಗಳಿಲ್ಲದೆ ಅಮಾಯಕ ವ್ಯಕ್ತಿಯನ್ನು ಮನೆಯಿಂದ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿ ಆಸ್ಪತ್ರಗೆ ದಾಖಲಾಗಿರುವ ವಿಚಾರ ತಿಳಿದು ಆಸ್ಪತ್ರೆಯ ಮುಂದೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ಬಳಿಕ ಬೆಳ್ತಂಗಡಿಯ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟನೆ ಆರಂಬಿಸಿದರು.
ಆರಂಭದಲ್ಲಿ ದೌರ್ಜ್ಯನಕ್ಕೆ ಒಳಗಾದ ವ್ಯಕ್ತಿಯ ಮನೆಯವರು ಹಾಗೂ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದ್ದಾರೆ ಎನ್ನಲಾದ ಕೀರ್ತನ್ ರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಲಾಯಿತು. ಪ್ರತಿಭಟನೆ ಉಗ್ರರೂಪಕ್ಕೆ ತಿರುಗಿ ಕಚೇರಿಗೆ ಬೀಗಜಡಿಯುವ ಹಂತಕ್ಕೆ ಹೋಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಪ್ರತಿಭಟನೆಯಲ್ಲಿ ಸೇರಿಕೊಂಡು ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಹಲ್ಲೆ ನಡೆಸಿದ ಅಧಿಕಾರಿಯನ್ನು ಸ್ಥಳಕ್ಕೆ ಕರೆಸುವ ವರೆಗೆ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಧರಣಿ ಕುಳಿತರು. ಒಂದು ಹಂತದಲ್ಲಿ ಪ್ರತಿಭಟನಕಾರರು ಮತ್ತು ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆಯಿತು. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು.
ಪ್ರತಿಭಟನಾಕಾರರು ಮಾತ್ರ ಇದು ಯಾವುದಕ್ಕೂ ಮಣಿಯಲಿಲ್ಲ ತಮಗೆ ನ್ಯಾಯಸಿಗಬೇಕು ಎಂದು ಸೇರಿದ್ದ ಮಹಿಳೆಯರೂ ದ್ವನಿಯೆತ್ತಿದರು. ಕೊನೆಗೂ ಸರ್ಕಲ್‌ಇನ್ಸ್‌ಪೆಕ್ಟರ್ ಅವರು ಹಲ್ಲೆಗೆ ಒಳಗಾಗಿರುವ ವ್ಯಕ್ತಿಯ ಹೇಳಿಕೆಯಂತೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಇದರ ವರದಿ ಬಂದ ಕೂಡಲೇ ಅದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದರು, ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ಅವರು ಘಟನೆಯ ಬಗ್ಗೆ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುವುದಾಗಿ ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು. ಇದಾದ ಬಳಿಕ ಆರೋಪಕ್ಕೆ ಒಳಗಾಗಿರುವ ವ್ಯಕ್ತಿಯ ವಿರುದ್ದ ಎರಡು ದಿನದಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆಗೆ ಒಳಗಾದ ವ್ಯಕ್ತಿಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಎರಡು ದಿನಗಳ ಬಳಿಕ ಮತ್ತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಶೇಖರ ಕುಕ್ಕೇಡಿ, ತಾಲೂಕು ಪಂಚಾಯತ್ ಸದಸ್ಯ ವಿಜಯಗೌಡ, ಶಶಿಧರ ಕಲ್ಮಂಜ, ಎಪಿಎಂಸಿ ಸದಸ್ಯ ಗಫೂರ್ ಪುದುವೆಟ್ಟು, ಗ್ರಾ. ಪಂ ಸದಸ್ಯರುಗಳಾದ ಪ್ರಭಾಕರ ಧರ್ಮಸ್ಥಳ, ರೋಯಿ ಪುದುವೆಟ್ಟು, ಅಝೀಝ್ ಮುಂಡಾಜೆ, ಸಿಪಿಐಎಂ ಮುಖಂಡ ಶೇಖರ ಲಾಯಿಲ, ಕಾಂಗ್ರೆಸ್ ಮುಖಂಡರುಗಳಾದ ಬಿ,ಕೆ ವಸಂತ್, ವಸಂತ ಪುದುವೆಟ್ಟು, ದಲಿತ ಸಂಘರ್ಷ ಸಮಿತಿಯ ಮುಖಂಡರುಗಳಾದ ನೇಮಿರಾಜ ಕಿಲ್ಲೂರು, ನಾಗರಾಜ ಲಾಯಿಲ, ಜಯಾನಂದ ಕೊಯ್ಯೂರು, ಬಿಜೆಪಿ ಮುಖಂಡರುಗಳಾದ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿಜಯ ಅತ್ತಾಜೆ, ಹಾಗೂ ಇತರ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ: ಪುದುವೆಟ್ಟು ರಕ್ಷಿತಾರಣ್ಯದಲ್ಲಿ ಮರ ಕಡಿದಿರುವ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಯಾರು ಕಡಿದಿರುವುದು ಎಂಬ ಬಗ್ಗೆ ಮಾಹಿತಿಯಿಲ್ಲ, ಅಪರಿಚಿತರಿಂದ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ. - ಸುಬ್ಬಯ್ಯ, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ ವಲಯ
ಮನೆಯಿಂದ ಏನೂ ಹೇಳದೆ ಕರೆದೊಯ್ದರು ಮನಬಂದಂತೆ ಥಳಿಸಿದ್ದಾರೆ. ಮೈಮೇಲೆಲ್ಲ ಗಾಯಗಳಾಗಿದೆ. ಹಲ್ಲೆ ಮಾಡಿದ ಬಗ್ಗೆ ಹೇಳಿದರೆ ನಿನ್ನ ಮನೆಯಲ್ಲಿ ಮರ ತಂದಿಟ್ಟು ಕೇಸು ಹಾಕುತ್ತೇನೆ ಎಂದು ಬೆದರಿಸಿದ್ದಾರೆ ಅದರಿಂದ ಹಲ್ಲೆಯ ಬಗ್ಗೆ ಆತ ಯಾರಿಗೂ ಹೇಳಿರಲಿಲ್ಲ ಇಂದು ಎದ್ದು ಓಡಾಡಲಾಗದ ಸ್ಥಿತಿ ಬಂದಾಗ ಆತನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಆತ ಮರಕಳ್ಳತನ ಮಾಡುವವನಲ್ಲ ಅಮಾನವೀಯವಾಗಿ ದೌರ್ಜನ್ಯ ನಡೆಸಲಾಗಿದ್ದು ನಮಗೆ ನ್ಯಾಯ ಕೊಡಬೇಕು - ಡೆನ್ನಿಸ್ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು: ಮನೆಯಿಂದ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿರುವ ಬಗ್ಗೆ ಕಮಲದಾಸ್ ಅವರು ನೀಡಿರುವ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮನೆಗೆ ಬಂದು ಮರ ಕೊಯ್ಯಲು ಇದೆ ಎಂದು ಹೇಳಿ ದಾಸ್‌ನನ್ನು ಫಾರೆಸ್ಟರ್ ಕೀರ್ತನ್ ಹಾಗೂ ಇತರರು ಕರೆದೊಯ್ದು ಧರ್ಮಸ್ಥಳದ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಕೂಡಿಹಾಕಿ ಕಾಡಿನಿಂದ ಮರ ಕಡಿದಿರುವುದಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ ಆದರೆ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ ಕೀರ್ತನ್ ಶೆಟ್ಟಿ ಹಾಗೂ ಇತರರು ಮುಖಕ್ಕೆ ಹಾಗೂ ಇತರೆಡೆಗೆ ಲಾಠಿ ಮತ್ತು ಕೈಯಿಂದ ಹಲ್ಲೆ ನಡೆಸಿರುವುದಾಗಿಯೂ ಕೊನೆಗೂ ಕಳ್ಳತನ ಮಾಡಿದ್ದನ್ನು ಒಪ್ಪಿಕೊಳ್ಳದಿದ್ದಾಗ ಪತ್ನಿಯೊಂದಿಗೆ ಕಳುಹಿಸಿರುವುದಾಗಿಯೂ ಇದೀಗ ಮೂತ್ರ ಮಾಡುವಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರಗೆ ದಾಖಲಾಗಿರುವುದಾಗಿಯೂ ದಾಸ್ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದು ಅದರಂತೆ ಕೀರ್ತನ್ ಹಾಗೂ ಇತರರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.







