ಕಾಂಗ್ರೆಸ್ ಮುಖಂಡ ಎಂ.ಎಲ್.ಫೋತೆದಾರ್ ನಿಧನ
ಹೊಸದಿಲ್ಲಿ, ಸೆ.28: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಮಖನ್‌ಲಾಲ್ ಫೋತೆದಾರ್ ದಿಲ್ಲಿಯ ಹೊರವಲಯದ ಗುರುಗಾಂವ್‌ನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್‌ಗಾಂಧಿಯವರ ವಿಶ್ವಾಸಪಾತ್ರರಾಗಿದ್ದ ಫೋತೆದಾರ್, 1980ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಇಂದಿರಾ ನಿಧನರಾದ ಬಳಿಕ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಫೋತೆದಾರ್‌ರನ್ನು 1983ರಲ್ಲಿ ರಾಜೀವ್ ಸಚಿವರಾಗಿ ನೇಮಕಗೊಳಿಸಿದ್ದರು. ಸುದೀರ್ಘಾವಧಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಫೋತೆದಾರ್, ಬಳಿಕ ಸಮಿತಿಯ ಖಾಯಂ ಆಹ್ವಾನಿತ ಸದಸ್ಯರಾಗಿದ್ದರು.
ಜಮ್ಮು-ಕಾಶ್ಮೀರ ವಿಧಾನಸಭೆಯ ಸದಸ್ಯರಾಗಿದ್ದ ಫೋತೆದಾರ್, 1967ರಿಂದ 1977ರವರೆಗೆ ಪಹಲ್‌ಗಾಂವ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ರಾಜ್ಯಸಭೆಯ ಸದಸ್ಯರಾಗಿ ಎರಡು ಅವಧಿಗೆ ಆಯ್ಕೆಯಾಗಿದ್ದರು.
ಫೋತೆದಾರ್ ನಿಧನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.





