ಕೈಕೊಟ್ಟ ಕಂಪ್ಯೂಟರ್ ಚೆಕ್-ಇನ್ ವ್ಯವಸ್ಥೆ: ವಿಶ್ವದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಗೊಂದಲ

ಹೊಸದಿಲ್ಲಿ, ಸೆ.28: ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿಶ್ವದಾದ್ಯಂತದ ಹಲವಾರು ವಿಮಾನ ನಿಲ್ದಾಣಗಳಲ್ಲಿರುವ ಕಂಪ್ಯೂಟರ್ ಚೆಕ್-ಇನ್ ವ್ಯವಸ್ಥೆ ಕೈಕೊಟ್ಟು ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಯಿತು.
ವಿಶ್ವದಾದ್ಯಂತದ 125 ಏರ್‌ಲೈನ್ಸ್‌ಗಳಲ್ಲಿ ಬಳಸಲಾಗುತ್ತಿರುವ ‘ಅಲ್ಟಿಯ ಸಾಫ್ಟ್‌ವೇರ್’ ನಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣ ವಿಮಾನ ನಿಲ್ದಾಣ, ಇಂಟರ್‌ನೆಟ್ ಬ್ರೌಸರ್‌ಗಳು ಹಾಗೂ ಮೊಬೈಲ್ ಆ್ಯಪ್‌ಗಳ ಚೆಕ್-ಇನ್ ಸೇವೆಗೆ ತೊಡಕುಂಟಾಯಿತು.
ಈ ಕಾರಣ ಲಂಡನ್, ನ್ಯೂಯಾರ್ಕ್, ಆಸ್ಟ್ರೇಲಿಯ, ಪ್ಯಾರಿಸ್, ವಾಷಿಂಗ್ಟನ್, ಸಿಂಗಾಪುರ್, ದಕ್ಷಿಣ ಕೊರಿಯ ಮತ್ತು ದಕ್ಷಿಣ ಆಫ್ರಿಕ ಸೇರಿದಂತೆ ವಿಶ್ವದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಪ್ರಯಾಣಿಕರು ಮಾರುದ್ದದ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.
ಕಂಪ್ಯೂಟರ್ ತಜ್ಞರು ಸಮಸ್ಯೆಯನ್ನು ಗುರುತಿಸಿದ್ದು ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದೆ ಎಂದು ಸಾಫ್ಟ್‌ವೇರ್ ರೂಪಿಸಿರುವ ‘ಅಮೇಡಿಯಸ್’ ಸಂಸ್ಥೆ ತಿಳಿಸಿದ್ದು, ಪ್ರಯಾಣಿಕರಿಗೆ ಆಗಿರುವ ಅನಾನುಕೂಲಕ್ಕೆ ವಿಷಾದ ಸೂಚಿಸಿದೆ. ಯಾವುದೇ ವಿಮಾನಯಾನ ರದ್ದಾಗಿರುವ ಬಗ್ಗೆ ವರದಿಯಾಗಿಲ್ಲ, ಆದರೆ ಕೆಲವು ವಿಮಾನಯಾನ ವಿಳಂಬವಾಗಿದೆ. ಚೆಕ್-ಇನ್ ವ್ಯವಸ್ಥೆಯ ಸಮಸ್ಯೆಯಿಂದಾಗಿ ತಾವು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಪ್ರಯಾಣಿಕರು ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.







