ಚಿಕ್ಕಬಳ್ಳಾಪುರ: ಕರ್ತವ್ಯ ಲೋಪ; ಆರೋಪ
ಗುಡಿಬಂಡೆ ಪಿಎಸ್ಸೈ ಸೇರಿ ಇಬ್ಬರು ಪೇದೆಗಳ ಅಮಾನತು
ಚಿಕ್ಕಬಳ್ಳಾಪುರ, ಸೆ.28: ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಗುಡಿಬಂಡೆ ಪಿಎಸ್ಸೈ ಪಾಪಣ್ಣ ಮತ್ತು ಇಬ್ಬರು ಪೇದೆಗಳನ್ನು ಏಮಾನತುಗೊಳಿಸಿ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಆದೇಶಿಸಿದ್ದಾರೆ.
ಜೈಲಿಗೆ ಕಳುಹಿಸಬೇಕಿದ್ದ ಆರೋಪಿಯೊಬ್ಬನನ್ನು ಜೈಲಿಗೆ ಕಳುಹಿಸದೇ ಆಸ್ಪತ್ರೆಗೆ ಸೇರಿಸಿರುವ ಆರೋಪ ಮತ್ತು ಹಿರಿಯ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದಿದ್ದ ಜಲ್ಲಿ ಕ್ರಷರ್‌ನ ಕಾವಲಿಗೆ ಪೇದೆಯನ್ನು ನೇಮಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ ನ್ಯಾಯಾಲಯದ ಆಸ್ತಿ ಕಳುವಾಗಲು ಕಾರಣರಾಗಿರುವ ಆರೋಪದ ಮೇಲೆ ಈ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಏನಿದು ಘಟನೆ: ಡಿಸಿ, ಎಸ್ಪಿ, ಡಿಎಫ್‌ಒ, ಎಸಿ, ಆರ್‌ಟಿಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಂಡಿಕಲ್ ಹೋಬಳಿಯಲ್ಲಿ ನಡೆಯುತ್ತಿದ್ದ ಜೆಲ್ಲಿ ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಪರವಾನಿಗೆ ರಹಿತವಾಗಿ ನಡೆಸುತ್ತಿದ್ದ 7 ಕ್ರಷರ್‌ಗಳಿಗೆ ಬೀಗ ಜಡಿದು ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಧಿಕಾರಿಗಳು ಕ್ರಷರ್‌ಗಳಿಗೆ ಬೀಗ ಜಡಿದ ವೇಳೆ ಕ್ರಷರ್‌ಗೆ ಸೇರಿದ ತಾಂತ್ರಿಕ ಉಪಕರಣಗಳು ಮತ್ತು ಸಿದ್ಧವಾಗಿದ್ದ ಜೆಲ್ಲಿಯನ್ನೂ ಪ್ರಕರಣದ ವ್ಯಾಪ್ತಿಯಲ್ಲಿ ದಾಖಲಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಬೀಗ ಜಡಿದ ಕ್ರಷರ್‌ಗಳ ಮುಂದೆ ಪೇದೆಯೊಬ್ಬರನ್ನು ಕಾವಲು ಹಾಕುವ ಕೆಲಸವನ್ನು ತನಿಖಾಧಿಕಾರಿಯಾಗಿರುವ ಪಿಎಸೈ ಪಾಪಣ್ಣ ಮಾಡಬೇಕಿತ್ತು. ಆದರೆ ಪೇದೆಯನ್ನು ಕಾವಲು ಹಾಕದ ಕಾರಣ ಕ್ರಷರ್‌ನಲ್ಲಿದ್ದ ಕೆಲ ತಾಂತ್ರಿಕ ಉಪಕರಣಗಳ ಜೊತೆಗೆ ಜೆಲ್ಲಿಯನ್ನು ಕಳವು ಮಾಡಲಾಗಿತ್ತು. ಅಧಿಕಾರಿಗಳು ಬೀಗ ಜಡಿದ ಮೇಲೆ ಅದು ನ್ಯಾಯಾಲಯದ ಆಸ್ತಿಯಾಗಿದ್ದು, ನ್ಯಾಯಾಲಯದ ಆಸ್ತಿ ಕಳವಾಗಲು ಪಿಎಸೈ ಕಾರಣರಾಗಿದ್ದಾರೆ ಎಂಬುದು ಮೊದಲ ಆರೋಪವಾಗಿದೆ.
ಜೈಲಿನ ಬದಲು ಆಸ್ಪತ್ರೆಗೆ ಆರೋಪಿ: ನ್ಯಾಯಾಲಯದ ಆಸ್ತಿ ಕಳುವಾಗಿರುವ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯಾಗಿದ್ದ ಭೈರಾರೆಡ್ಡಿ ಎಂಬವರನ್ನು ಬಂಧಿಸಲು ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಅವರು ಪಿಎಸೈ ಪಾಪಣ್ಣ ಅವರಿಗೆ ಸೂಚಿಸಿದ್ದರು, ಇದರಿಂದ ಭೈರಾರೆಡ್ಡಿಯನ್ನು ಮಂಗಳವಾರ ಬಂಧಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಕಾರಣ ಜಿಲ್ಲಾ ಕಾರಾಗೃಹಕ್ಕೆ ಬಿಡಲು ಮುಂಜಾನೆ 2:30ರ ಸಮಯದಲ್ಲಿ ಪೊಲೀಸರು ತೆರಳಿದ್ದರು.
ಈ ವೇಳೆ ಕಾರಾಗೃಹದಲ್ಲಿ ಅಧೀಕ್ಷಕರು ಇಲ್ಲದ ಕಾರಣ ಜೈಲಿನ ಸಿಬ್ಬಂದಿ ಕರೆ ಮಾಡಿ ಅಧೀಕ್ಷಕಿ ರತ್ನಮ್ಮ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಅಧೀಕ್ಷಕರು, ಮುಂಜಾನೆ 3 ಗಂಟೆ ಸಮಯಕ್ಕೆ ಜಿಲ್ಲಾ ಕಾರಾಗೃಹಕ್ಕೆ ಆಗಮಿಸುವ ವೇಳೆಗೆ ಆರೋಪಿಯೊಂದಿಗೆ ಪೊಲೀಸರೂ ನಾಪತ್ತೆಯಾಗಿದ್ದು, ಜೈಲಿನಲ್ಲಿರಿಸಲಾಗಿದೆ ಎಂದು ಡೈರಿಯಲ್ಲಿ ನಮೂದಿಸಿ ಆರೋಪಿಯನ್ನು ಕರೆದೊಯ್ದಿರುವ ವಿಚಾರ ತಿಳಿದ ಅಧೀಕ್ಷಕಿ ರತ್ನಮ್ಮ ಜಿಲ್ಲಾ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಮೂವರ ಅಮಾನತು: ಜೈಲಿಗೆ ಕಳುಹಿಸಿದ ಮೇಲೆ ಅನಾರೋಗ್ಯ ಇದ್ದಲ್ಲಿ ಕಾರಾಗೃಹ ಸಿಬ್ಬಂದಿಯೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂಬ ನಿಯಮವಿದೆ. ಆದರೆ ನಿಯಮ ಉಲ್ಲಂಘಿಸಿ ಪೊಲೀಸರೇ ಕಾರಾಗೃಹ ಸಿಬ್ಬಂದಿಯ ಕರ್ತವ್ಯ ನಿರ್ವಹಿಸಿದ್ದಾರೆಂಬುದು ಎರಡನೆ ಆರೋಪವಾಗಿದೆ. ಹಾಗಾಗಿ ಪಿಎಸೈ ಪಾಪಣ್ಣ, ಪೇದೆಗಳಾದ ಮುನಿರಾಜು ಮತ್ತು ಸುನಿಲ್ ಎಂಬವರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದಾರೆ.







