ಬಡವರಿಗೆ, ಮಧ್ಯಮ ವರ್ಗದವರಿಗೆ ನಿವೇಶನ ನೀಡಲು ಒತ್ತು: ಸೈಯದ್ ಹನೀಫ್

ಚಿಕ್ಕಮಗಳೂರು, ಸೆ.28:ನಗರದ ಹೊರವಲಯದ ಉಪ್ಪಳ್ಳಿ ಸಮೀಪ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನವಾಗಿ ನಿರ್ಮಿಸಿರುವ ಬಡಾವಣೆಯ ನಿವೇಶನಗಳನ್ನು ಗುರುವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಶೇ.10 ರಷ್ಟು ಪ್ರಾರಂಭಿಕ ಠೇವಣಿ ಪಾವತಿ ಮಾಡಿದವರಿಗೆ ಲಾಟರಿ ಎತ್ತುವ ಮೂಲಕ ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಹನೀಫ್ ಮಾತನಾಡಿ, ಸರ್ಕಾರ ಪ್ರತಿಯೊಬ್ಬರಿಗೂ ಸೂರು ನೀಡಬೇಕೆಂಬ ಉದ್ದೇಶದಿಂದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ಬಡಾವಣೆಗಳನ್ನು ನಿರ್ಮಿಸುವುದರೊಂದಿಗೆ ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಈಗಾಗಲೇ ಉಪ್ಪಳ್ಳಿ ಸಮೀಪ ನಿರ್ಮಾಣ ಮಾಡುತ್ತಿರುವ ವಾಜಪೇಯಿ ಬಡಾವಣೆ ಅಭಿವೃದ್ಧಿಗೆ 118 ಕೋಟಿ ರೂ. ಸಾಲ ನೀಡುವಂತೆ ಹುಡ್ಕೋಗೆ ಪ್ರಸ್ತಾವನೆ ಸಲ್ಲಿಸಿದ್ದು, ಹುಡ್ಕೋವತಿಯಿಂದ ಪ್ರಾಥಮಿಕ ಹಂತದಲ್ಲಿ 74 ಕೋಟಿ ರೂ. ಬಿಡುಗಡೆ ಮಾಡಲಿದೆ. ಬಡಾವಣೆಯ ಅಭಿವೃದ್ಧಿಗೆ ಹಣ ಲಭ್ಯವಿದ್ದು, ಆದ್ಯತೆಯ ಮೇಲೆ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೊಂಡು ಒಂದು ವರ್ಷದ ಒಳಗೆ ಬಡಾವಣೆ ಸಿದ್ಧಗೊಳ್ಳಲು ಸಂಬಂಧ ಪಟ್ಟ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ನಿವೇಶನ ಕೋರಿ 8000 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದ ಅವರು, 190 ಎಕರೆ ವಿಸ್ತೀರ್ಣದಲ್ಲಿ ಸಿದ್ಧಗೊಳ್ಳುತ್ತಿರುವ ಬಡಾವಣೆಯಲ್ಲಿ ಸುಮಾರು 2,500 ಕ್ಕು ಹೆಚ್ಚು ಸೈಟ್‍ಗಳಿದ್ದು, ಈಗಾಗಲೇ ಜಮೀನು ನೀಡಿದ ರೈತರಿಗೆ ಶೇ.40 ಹಾಗೂ 60 ರ ಪಾಲುದಾರಿಕೆಯಲ್ಲಿ ಹಂಚಿಕೆಯಾಗಿವೆ ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಎಚ್.ಡಿ.ತಮ್ಮಯ್ಯ, ಎಂ.ಶ್ರೀನಿವಾಸ್, ಚಂದ್ರು, ರಾಮಸ್ವಾಮಿ, ತೆರೆಸಾ, ನಗರಾಭಿವೃದ್ಧಿ ಆಯುಕ್ತ ಭೀಮರೆಡ್ಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.







