80ರ ವಯಸ್ಸಿನಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿರುವ ಸಿನ್ಹಾ: ಜೇಟ್ಲಿ

ಹೊಸದಿಲ್ಲಿ,ಸೆ.28: ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ತನ್ನ ಕುರಿತು ಮಾಡಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಗುರುವಾರ ಮೌನ ಮುರಿದಿರುವ ವಿತ್ತಸಚಿವ ಅರುಣ್ ಜೇಟ್ಲಿ ಅವರು, ವಿತ್ತಸಚಿವನಾಗಿ ತನ್ನ ದಾಖಲೆಯನ್ನು ಮರೆತಿರುವ ಮತ್ತು ನೀತಿಗಳ ಬದಲು ವ್ಯಕ್ತಿಗಳನ್ನು ಟೀಕಿಸುತ್ತಿರುವ 80ರ ಹರೆಯದ ಉದ್ಯೋಗಾಕಾಂಕ್ಷಿ ಎಂದು ಬಣ್ಣಿಸುವ ಮೂಲಕ ಸಿನ್ಹಾ ಅವರಿಗೆ ತಿರುಗೇಟು ನೀಡಿದ್ದಾರೆ.
ಸಿನ್ಹಾ ಅವರು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರ ಧಾಟಿಯಲ್ಲಿಯೇ ಮಾತನಾಡುತ್ತಿದ್ದಾರೆ. ಚಿದಂಬರಂ ಮತ್ತು ತನ್ನ(ಸಿನ್ಹಾ)ನಡುವಿನ ತೀವ್ರ ವಾಗ್ಯುದ್ಧಗಳನ್ನು ಅವರು ಮರೆತೇಬಿಟ್ಟಿದ್ದಾರೆ ಎಂದು ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಜೇಟ್ಲಿ ಆರೋಪಿಸಿದರು.
ಸಿನ್ಹಾ ಅವರ ಹೆಸರೆತ್ತದೆ ಅವರ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ ಜೇಟ್ಲಿ, ಮಾಜಿ ವಿತ್ತ ಸಚಿವ(ಸಿನ್ಹಾ)ನಾಗುವ ಸುಖ ತನಗಿನ್ನೂ ದೊರಕಿಲ್ಲ, ಅಂಕಣಕಾರನಾಗಿ ಬದಲಾಗಿರುವ ಮಾಜಿ ವಿತ್ತ ಸಚಿವ(ಚಿದಂಬರಂ) ನಾಗುವ ಸೌಭಾಗ್ಯವೂ ತನಗಿನ್ನೂ ಬಂದಿಲ್ಲ ಎಂದು ಹೇಳಿದರು.
ಒಂದೇ ಧ್ವನಿಯಲ್ಲಿ ಮಾತನಾಡಿದ ತಕ್ಷಣ ಸತ್ಯವು ಬದಲಾಗುವುದಿಲ್ಲ ಎಂದ ಜೇಟ್ಲಿ, ಇಂತಹ ಟೀಕೆಗಳ ಮೂಲಕ ಸಿನ್ಹಾ ಈ ವಯಸ್ಸಿನಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದಾರೆ ಎಂದು ಕುಟುಕಿದರು.
@‘‘ಇಂಡಿಯಾ 70 ಮೋದಿ@@ 3.5’’ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಜೇಟ್ಲಿ ‘‘ಇಂಡಿಯಾ 70 ಮೋದಿ@3.5 ಮತ್ತು ಉದ್ಯೋಗಾಕಾಂಕ್ಷಿ@80’’ ಎಂಬ ಶೀರ್ಷಿಕೆ ಈ ಪುಸ್ತಕಕ್ಕೆ ಹೆಚ್ಚು ಸೂಕ್ತವಾಗಿರುತ್ತಿತ್ತು ಎಂದು ಹೇಳಿದರು.
ಭಾರತದ ಆರ್ಥಿಕತೆ ತಳ ಕಚ್ಚಿರುವ ಕುರಿತಂತೆ ಸಿನ್ಹಾ ಬುಧವಾರ ಆಂಗ್ಲ ದೈನಿವೊಂದರಲ್ಲಿನ ಲೇಖನದಲ್ಲಿ ಮೋದಿ ಸರಕಾರ ಮತ್ತು ಜೇಟ್ಲಿಯವರ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ್ದರು.







