ಪ್ರವಾಸಿಗರು ಸ್ವಚ್ಛತೆಗೆ ಒತ್ತು ನೀಡಬೇಕು: ಜಿಲ್ಲಾಧಿಕಾರಿ ಸತ್ಯವತಿ

ಚಿಕ್ಕಮಗಳೂರು, ಸೆ.28: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಸ್ವಚ್ಛತೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ಮನವಿ ಮಾಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಳ್ಳಯ್ಯನಗಿರಿ, ಸೀತಾಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್‍ಗಿರಿಗಳಿಗೆ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್‍ಗಳನ್ನು ಹಾಗೂ ಮಧ್ಯಪಾನ ಮಾಡಿ ಬಾಟಲ್‍ಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಸ್ವಚ್ಛತೆಯನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗಿದೆ ಇಬ್ಬರು ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದ್ದು ಇನ್ನೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕಾಗಿದೆ ಎಂದು ತಿಳಿಸಿದರು.
ಶಾಸಕ ಸಿ.ಟಿ. ರವಿ ಅವರು ಮಾತನಾಡಿ, ಗಿರಿಗಳಲ್ಲಿ ರಸ್ತೆಗಳು ದುರಸ್ಥಿಯಲ್ಲಿದ್ದು ಉದ್ದದ ವಾಹನಗಳು ಓಡಾಡಲು ಆಗುವುದಿಲ್ಲ ರಸ್ತೆ ದುರಸ್ಥಿಯಾಗುವವರೆಗೆ ಜೀಪ್‍ಗಳಲ್ಲೆ ಓಡಾಡಬೇಕು. ಪ್ರವಾಸಿಗರು ಶನಿವಾರ ಹಾಗೂ ಭಾನುವಾರಗಳಂದು ಹೆಚ್ಚಾಗಿ ಆಗಮಿಸುವುದರಿಂದ ಅಂದು ಪೊಲೀಸ್ ಸಿಬ್ಬಂದಿಗಳನ್ನು ಹೆಚ್ಚಾಗಿ ನಿಯೋಜಿಸಬೇಕು. ಅನೂಚಿತವಾಗಿ ವರ್ತಿಸುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸುವ ವ್ಯವಸ್ಥೆಯಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ಮಾಡುವವರ ವಿರುದ್ಧ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಿಂದುಳಿದ, ಅಲ್ಪಸಂಖ್ಯಾತ, ಪ.ಜಾತಿ ಮತ್ತು ಪಂಗಡದ ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ 2017-18ನೇ ಸಾಲಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಸಭೆಗೆ ತಿಳಿಸಿದರು.







