ಮಡಿಕೇರಿ: ಆದಿ ವಾಸಿಗಳಿಗೆ ನೆಲೆ ಕಲ್ಪಿಸಲು ಡಿಸಿ ಸೂಚನೆ

ಮಡಿಕೇರಿ, ಸೆ.28: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಗುರು ವಾರ ಜಿಲ್ಲಾ ಮಟ್ಟದ ಅರಣ್ಯಹಕ್ಕು ಸಮಿತಿ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಯವರು, ಕಾಡಿನಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರನ್ನು ಸ್ಥಳಾಂತರಿಸಲು ಸೂಕ್ತ ಜಾಗ ಗುರುತಿಸಿ ನೆಲೆ ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಹಾಡಿಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ಯನ್ನು ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಹಾಡಿಗಳಲ್ಲಿ ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿ ಸರಕಾರದ ಸವಲತ್ತುಗಳನ್ನು ಅಲ್ಲಿನ ಜನರಿಗೆ ತಲುಪುವಂತೆ ಅಧಿಕಾರಿಗಳು ಗಮನಹರಿಸಬೇಕು. ಇದರೊಂದಿಗೆ ಅರಣ್ಯ ರಕ್ಷಣೆಗೆ ಎಲ್ಲಾ ಅಧಿಕಾರಿಗಳು ಬದ್ಧರಾಗಿರಬೇಕು. ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ ಅದರ ಪ್ರಯೋಜನವನ್ನು ಹಾಡಿಯಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿರಾಜಪೇಟೆ ತಾಲೂಕು ಪರಿಶಿಷ್ಟ ಪಂಗಂಡದ ಕಲ್ಯಾಣಾಧಿಕಾರಿ ಚಂದ್ರಶೇಖರ್ ಅವರು ಮಾಹಿತಿ ನೀಡಿ, ಇದುವರೆಗೆ 199 ಅರ್ಜಿಗಳು ಸ್ವೀಕೃತವಾಗಿದ್ದು, ಅವು ಪರಿಶೀಲನೆ ಹಂತದಲ್ಲಿವೆ ಎಂದರು.
ಸಭೆಯಲ್ಲಿ ಜಿ.ಪಂ. ಸದಸ್ಯರು, ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸದಸ್ಯರಾದ ಪಂಕಜಾ, ಕುಮಾರ್, ಉಪ ವಿಭಾಗಾ ಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜಯ, ಐ.ಟಿ.ಡಿ.ಪಿ.ಯೋಜನಾ ಸಮನ್ವಯಾಧಿಕಾರಿ ಪ್ರಕಾಶ, ತಾ.ಪಂ.ಇಒಗಳಾದ ಪಡ್ನೆಕರ್, ಜೀವನ್ ಕುಮಾರ್, ಮಡಿಕೇರಿ ತಹಶೀಲ್ದಾರ್ ಕುಸುಮಾ, ಸೋಮವಾರಪೇಟೆ ತಾಲೂಕು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಂಡದ ಕಲ್ಯಾಣಾಧಿಕಾರಿ ರಾಮೇಗೌಡ, ಮಡಿಕೇರಿ ತಾಲೂಕು ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಂಡದ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಖಾರಿಗಳು ಹಾಜರಿದ್ದರು.







