ನಾಲ್ಕನೆ ಏಕದಿನ: ಇಂಗ್ಲೆಂಡ್‌ಗೆ ಆರು ರನ್ ಜಯ
ಆಂಗ್ಲರಿಗೆ ನೆರವಾದ ಡಿಎಲ್ ನಿಯಮ, ಲೂಯಿಸ್ ಶತಕ ವ್ಯರ್ಥ

ಲಂಡನ್, ಸೆ.28: ಮಳೆಬಾಧಿತ ನಾಲ್ಕನೆ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಆರು ರನ್‌ಗಳ ರೋಚಕ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ 5 ವಿಕೆಟ್‌ಗಳ ನಷ್ಟಕ್ಕೆ 356 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಇಂಗ್ಲೆಂಡ್ ಮಳೆಯಿಂದಾಗಿ ಪಂದ್ಯ ನಿಂತಾಗ 35.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು. ಈ ಹಂತದಲ್ಲಿ ಡಿಎಲ್ ನಿಯಮದ ಪ್ರಕಾರ ಇಂಗ್ಲೆಂಡ್ ಮುನ್ನಡೆಯಲ್ಲಿತ್ತು. ಅಜೇಯ 48 ರನ್(25 ಎಸೆತ, 6 ಬೌಂಡರಿ, 2 ಸಿಕ್ಸರ್)ಗಳಿಸಿದ್ದ ಮೊಯಿನ್ ಅಲಿ ಇಂಗ್ಲೆಂಡ್‌ನ ರನ್‌ರೇಟ್ ಏರಲು ನೆರವಾದರು. ಅಲಿ ಹಾಗೂ ಜೋಸ್ ಬಟ್ಲರ್(ಅಜೇಯ 43)6ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 77 ರನ್ ಸೇರಿಸಿದರು. ತಂಡಕ್ಕೆ ವಾಪಸಾಗಿರುವ ಆರಂಭಿಕ ಆಟಗಾರ ಜೇಸನ್ ರಾಯ್ ತನ್ನ ತವರು ಮೈದಾನದಲ್ಲಿ 84 ರನ್ ಗಳಿಸಿ ಉತ್ತಮ ಆರಂಭ ನೀಡಿದರು.
►ಲೂಯಿಸ್ ಭರ್ಜರಿ ಶತಕ, ವಿಂಡೀಸ್ 356/5: ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ವೆಸ್ಟ್‌ಇಂಡೀಸ್ ತಂಡ ಆರಂಭಿಕ ಆಟಗಾರ ಎವಿನ್ ಲೂಯಿಸ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್(176 ರನ್, 130 ಎಸೆತ, 17 ಬೌಂಡರಿ, 7 ಸಿಕ್ಸರ್) ಬೆಂಬಲದಿಂದ 5 ವಿಕೆಟ್‌ಗಳ ನಷ್ಟಕ್ಕೆ 356 ರನ್ ಗಳಿಸಿತು.
ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ಲೂಯಿಸ್ 47ನೆ ಓವರ್‌ನಲ್ಲಿ ವೇಗಿ ಜಾಕ್ ಬಾಲ್ ಎಸೆದ ಚೆಂಡು ಕಾಲಿಗೆ ಅಪ್ಪಳಿಸಿದ ಕಾರಣ ಗಾಯಗೊಂಡು ನಿವೃತ್ತಿಯಾದರು. 25ರ ಹರೆಯದ ಟ್ರಿನಿಡಾಡ್ ಬ್ಯಾಟ್ಸ್‌ಮನ್ ಸ್ವಲ್ಪ ಹೊತ್ತು ಮೈದಾನದಲ್ಲಿ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಸ್ಟ್ರಚರ್‌ನ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಲಾಗಿದೆ. ಗಾಯಗೊಂಡು ನಿವೃತ್ತಿಯಾಗುವ ಮೊದಲು ಲೂಯಿಸ್ ಅವರು ಜೇಸನ್ ಮುಹಮ್ಮದ್‌ರೊಂದಿಗೆ 4ನೆ ವಿಕೆಟ್‌ಗೆ 117 ರನ್ ಹಾಗೂ ನಾಯಕ ಜೇಸನ್ ಹೋಲ್ಡರ್(77) ಅವರೊಂದಿಗೆ 5ನೆ ವಿಕೆಟ್‌ಗೆ 168 ರನ್ ಜೊತೆಯಾಟ ನಡೆಸಿದ್ದರು.







