ಭಗತ್‌ಸಿಂಗ್ ಜಯಂತಿ ಆಚರಣೆಗೆ ಸರಕಾರಗಳು ನಿರ್ಲಕ್ಷ್ಯ: ಶಿವಣ್ಣ

ಬಾಗೇಪಲ್ಲಿ, ಸೆ.28: ಸರಕಾರ ಜಾತಿಗೊಂದು ಜಯಂತಿ ಮಾಡುತ್ತಿರುವುದು ಸ್ವಾಗತಾರ್ಹ, ಆದರೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಗತ್‌ಸಿಂಗ್‌ರಂತಹ ದೇಶಭಕ್ತರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಣೆ ಮಾಡದಿರುವುದು ಬೇಸರದ ಸಂಗತಿ ಎಂದು ವಿಕಾಸ್ ಕಾಲೇಜು ಪ್ರಾಂಶುಪಾಲ ಪಿ.ಎನ್.ಶಿವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಎಫ್‌ಐ ವತಿಯಿಂದ ಆಯೋಜಿಸಿದ್ದ ಭಗತ್‌ಸಿಂಗ್‌ರ 123ನೆ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಗತ್‌ಸಿಂಗ್ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ, ತ್ಯಾಗ ಬಲಿದಾನಗಳಿಗೆ ಮತ್ತೊಂದು ಹೆಸರೇ ಭಗತ್‌ಸಿಂಗ್ ಎಂದ ಅವರು, ಬಾಲ್ಯದಿಂದಲೂ ದೇಶಪ್ರೇಮವನ್ನು ಬೆಳೆಸಿಕೊಂಡಿದ್ದ ಭಗತ್‌ಸಿಂಗ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಕೊಡುಗೆ ನೀಡಿ, 23ನೆ ವಯಸ್ಸಿಗೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಮಹಾನ್ ಹೋರಾಟಗಾರ. ಇಂತಹ ಹೋರಾಟಗಾರನನ್ನು ಇಡೀ ಪ್ರಪಂಚವೇ ನೆನೆಯುತ್ತಿದ್ದರೂ ನಮ್ಮ ದೇಶದಲ್ಲಿ ಮಾತ್ರ ಅವರನ್ನು ಮರೆಯಲಾಗುತ್ತಿದೆ ಎಂದು ವಿಷಾದಿಸಿದರು.
ವಿದ್ಯಾರ್ಥಿ ಫೆಡರೇಶನ್ ಜಿಲ್ಲಾದ್ಯಕ್ಷ ಎ.ಸೋಮಶೇಖರ್ ಮಾತನಾಡಿ, ದೇಶದ ಯುವಕರ ಪಾಲಿಗೆ ಭಗತ್‌ಸಿಂಗ್, ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದರಂತಹ ಮಾನವತಾವಾದಿಗಳು ಮಾದರಿಯಾಗಬೇಕು. ಪ್ರಸಕ್ತ ದೇಶದಲ್ಲಿ ದಿನಕ್ಕೊಂದಂರಂತೆ ಜಾತಿ ಸೂಚಕ ಜಯಂತಿ ಆಚರಣೆಗಳನ್ನು ಮಾಡುವ ಸರಕಾರಗಳು ಭಗತ್‌ಸಿಂಗ್, ಅಂಬೇಡ್ಕರ್ ಅವರ ವಿಷಯಗಳನ್ನು ಯುವಜನರಿಗೆ ಮುಟ್ಟಿಸಿವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರೆಡ್ಡಮ್ಮ, ವೆಂಕಟೇಶ್, ಆರ್.ವಿ.ವೆಂಕಟೇಶ್, ಪತ್ರಕರ್ತ ಜಿ.ವೆಂಕಟೇಶ್, ರಾಜೇಶ್, ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ರಮೇಶ್, ಗುಡಿಬಂಡೆ ನಾಗೇಶ್, ಮುಖಂಡರಾದ ಗಣೇಶ, ಮೋಹನ, ಲಕ್ಷ್ಮೀ, ಸೌಮ್ಯಾ, ನಂದಿತಾ ಮತ್ತಿತರರು ಉಪಸ್ಥಿತರಿದ್ದರು.







