"ವಿದ್ಯಾರ್ಥಿನಿಯ ಮಾನವನ್ನು ಮಾರುಕಟ್ಟೆಗೆ ಒಯ್ದವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆಯೇ?"
ಅನ್ಯಾಯವನ್ನು ಪ್ರಶ್ನಿಸಿದ್ದೇ ತಪ್ಪು ಎಂದ ಬನಾರಸ್ ಹಿಂದೂ ವಿವಿಯ ಉಪಕುಲಪತಿ

ವಾರಣಾಸಿ, ಸೆ.29: ವಿದ್ಯಾರ್ಥಿನಿಯೊಬ್ಬಳಿಗೆ ದುಷ್ಕರ್ಮಿಗಳು ಕಿರುಕುಳ ನೀಡಿದ್ದನ್ನು ವಿರೋಧಿಸಿ ಇತ್ತೀಚೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್ ನಡೆಸಿದ ಪ್ರಕರಣ ವಿವಾದದಲ್ಲಿರುವಂತೆಯೇ ವಿವಿಯ ಉಪಕುಲಪತಿ ಮಾಡಿದ 'ಧರ್ಮ, ಕರ್ತವ್ಯ'ದ ಪಾಠಗಳು ವಿವಾದವನ್ನು ಸೃಷ್ಟಿಸಿದೆ.
ವಿಶ್ವವಿದ್ಯಾಲಯದ ಉಪಕುಲಪತಿ ಜಿ.ಸಿ. ತ್ರಿಪಾಠಿ ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ತ್ರಿವೇಣಿ ಕಾಂಪ್ಲೆಕ್ಸ್ ನಲ್ಲಿ ನಡೆಸಿದ ಸಭೆಯೊಂದರಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆಗಳು ವೈರಲ್ ಆಗುತ್ತಿದೆ.
ಸಭೆಯ ಘಟನಾವಳಿಗಳನ್ನು ಕೆಲವರು ವೀಡಿಯೋ ಚಿತ್ರೀಕರಣ ಮಾಡಿದ್ದು, ಇದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಉಪಕುಲಪತಿ ತ್ರಿಪಾಠಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡುತ್ತಾ, "ಯಾರು ತಮ್ಮ ಕರ್ತವ್ಯವನ್ನು ಚೆನ್ನಾಗಿ ಮಾಡಬಲ್ಲರೋ ಅವರು ಮಾತ್ರ ಧರ್ಮದ ಬಗ್ಗೆ ಮಾತನಾಡಲು ಅರ್ಹರು. ಹುಡುಗಿಯೊಬ್ಬಳ ಮಾನವನ್ನು ಮಾರುಕಟ್ಟೆಗೆ ಒಯ್ದವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆಯೇ ಎಂಬುದನ್ನು ನೀವು ನನಗೆ ಹೇಳಿ" ಎಂದಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯೊಬ್ಬಳು ಉಪಕುಲಪತಿಗಳನ್ನದ್ದೇಶಿಸಿ "ಸರ್, ವಿದ್ಯಾರ್ಥಿನಿಯರ ವಿರುದ್ಧ ಲಾಠಿ ಪ್ರಯೋಗ ಸರಿಯೇ ಎಂದು ನೀವು ನನಗೆ ಹೇಳಿ,'' ಎಂದು ಪ್ರಶ್ನಿಸಿದಾಗ "ಹಲವಾರು ಬಾರಿ ನಿಮ್ಮ ಹಿರಿಯ ಶಿಕ್ಷಕರು ನಿಮ್ಮಲ್ಲಿ ಮಾತನಾಡಿ ಮನವೊಲಿಸಲು ಯತ್ನಿಸಿದ್ದಾರೆ. ಇಂತಹ ಅನುಚಿತ ಘಟನೆಗಳು ಎಷ್ಟು ಬಾರಿ ನಡೆದಿವೆ ?, ನಾನು ಹಾಸ್ಟೆಲ್ ಗೆ ಹಲವಾರು ಬಾರಿ ಬಂದಿದ್ದೇನೆ. ಇಂತಹ ಘಟನೆಗಳ ಬಗ್ಗೆ ಯಾರಾದರೂ ಏನಾದರೂ ಹೇಳಿದ್ದಾರೆಯೇ ?"' ಎಂದು ಪ್ರಶ್ನಿಸಿದ್ದಾರೆ.
ಈ ಸಭೆಯ ನಂತರ ವಿಶ್ವವಿದ್ಯಾಲಯ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ ದೈಹಿಕ ಶಿಕ್ಷಣ ವಿಭಾಗದ ಹಿರಿಯ ವಿದ್ಯಾರ್ಥಿನಿಯರನ್ನು ಭದ್ರತಾ ಸಿಬ್ಬಂದಿಯಾಗಿ ವಿವಿಯ ಕಲಿಯುವಿಕೆಯ ಜತೆಗೆ ದುಡಿಮೆ ಯೋಜನೆಯನ್ವಯ ನೇಮಿಸಲಾಗುವುದು ಎಂದಿದ್ದಾರೆಂದು ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಮುಖ್ಯ ಶಿಸ್ತುಪಾಲನಾಧಿಕಾರಿಯಾಗಿ ರೊಯನಾ ಸಿಂಗ್ ಎಂಬವರನ್ನೂ ನೇಮಿಸಲಾಗಿದೆ ಎಂದೂ ಉಪಕುಲಪತಿ ಮಾಹಿತಿ ನೀಡಿದ್ದಾರೆ.







