ರಜೆ ಹಾಕದೆ ಜನರ ಸಂಕಷ್ಟಕ್ಕೆ ಸ್ಪಂದಿಸಿ: ಮೇಯರ್ ಸಂಪತ್ ರಾಜ್
ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು, ಸೆ.29: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಆದುದರಿಂದ, ಮಳೆ ನಿಲ್ಲುವವರೆಗೆ ರಜೆ ಹಾಕದೆ ದಿನದ 24 ಗಂಟೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ನೂತನ ಮೇಯರ್ ಸಂಪತ್‌ರಾಜ್ ಸೂಚನೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಮಳೆಯಿಂದ ಬಾಧಿತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕಾರ್ಯಕೈಗೊಂಡ ಅವರು, ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಶಾಂತಿನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಮೇಯರ್, ಮಳೆ ಅನಾಹುತದಿಂದ ಸಂಕಷ್ಟ ಎದುರಿಸುತ್ತಿರುವ ಜನರನ್ನು ಸಂಪರ್ಕಿಸಿ ಅಹವಾಲುಗಳನ್ನು ಸ್ವೀಕರಿಸಿದರು.
ನಗರದ ಬಹುತೇಕ ರಸ್ತೆಗಳು ಮಳೆಯಿಂದಾಗಿ ಗುಂಡಿ ಬಿದ್ದಿರುವುದು. ಒಳಚರಂಡಿಗಳಲ್ಲಿ ಹೂಳು ತುಂಬಿಕೊಂಡ ಪರಿಣಾಮ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ಮೇಲೆ ನೀರು ನಿಲ್ಲುವಂತಾಗಿದೆ. ಇದನ್ನು ಗಮನಿಸಿದ ಮೇಯರ್, ಕೂಡಲೆ ಚರಂಡಿಗಳಲ್ಲಿ ತುಂಬಿ ಕೊಂಡಿರುವ ಹೂಳು ತೆಗೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವ್ಯಾಪಾರಿಗಳಿಗೆ ಮೇಯರ್ ಮನವಿ: ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಪಾದಚಾರಿ ಮಾರ್ಗಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ಬಾಳೆಕಂದು, ಮಾವಿನ ಸೊಪ್ಪು, ಹೂವು, ಹಣ್ಣು ತಂದು ಮಾರಾಟ ಮಾಡುವ ವ್ಯಾಪಾರಿಗಳನ್ನು ಭೇಟಿ ಮಾಡಿ ಮೇಯರ್ ಮಾತುಕತೆ ನಡೆಸಿದರು.
ವ್ಯಾಪಾರ ಪೂರ್ಣಗೊಂಡ ಬಳಿಕ ತ್ಯಾಜ್ಯವನ್ನು ವಾಪಸ್ ತೆಗೆದುಕೊಂಡು ಹೋಗಿ ಹೊಲದಲ್ಲಿ ಹೂತಿಟ್ಟರೆ ಗೊಬ್ಬರವಾಗುತ್ತದೆ. ಎಲ್ಲೆಂದರಲ್ಲಿ ಬಿಸಾಡಿ ಹೋದರೆ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆಯಾಗುತ್ತದೆ. ಆದುದರಿಂದ, ದಯವಿಟ್ಟು ಸ್ವಚ್ಛ ಬೆಂಗಳೂರಿಗಾಗಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಬಿಸಾಡದೆ, ತಮ್ಮ ಗ್ರಾಮಗಳಿಗೆ ವಾಪಸ್ ತೆಗೆದುಕೊಂಡು ಹೋಗಬೇಕು ಎಂದು ವ್ಯಾಪಾರಿಗಳಿಗೆ ಮನವಿ ಮಾಡಿದರು.
ಪೆಟ್ಟಿಗೆ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ಅಂಗಡಿಯವರು, ಗಾಡಿ ವ್ಯಾಪಾರಿಗಳನ್ನು ಮಾತನಾಡಿಸಿದ ಮೇಯರ್, ಕಾಫಿ, ಟೀ ಮತ್ತಿತರ ತಿಂಡಿ ತಿನಿಸಿನ ಉಳಿಕೆ ಪದಾರ್ಥಗಳನ್ನು ಒಂದು ಬುಟ್ಟಿಯಲ್ಲಿ ಹಾಕಿಟ್ಟು ಕೊಳ್ಳಬೇಕು. ಪೌರಕಾರ್ಮಿಕರ ಗಾಡಿಗಳು ಬಂದಾಗ ಈ ಎಲ್ಲ ತ್ಯಾಜ್ಯವನ್ನು ಅವರಿಗೆ ನೀಡಿ ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡಬೇಕೆಂದು ಕೋರಿದರು.







