'ಗಾಂಜಾ ಗ್ರಾಮ'ವನ್ನು ಪತ್ತೆಹಚ್ಚಿದ ಪೊಲೀಸರು!
ಗಾಂಜಾ ಬೆಳೆದೇ ಜೀವನ ನಡೆಸುತ್ತಿದ್ದಾರಂತೆ ಇಲ್ಲಿನ ಗ್ರಾಮಸ್ಥರು!

ಹೈದರಾಬಾದ್, ಸೆ. 29: ಗ್ರಾಮವೊಂದರ ಜನರು ಗಾಂಜಾ ಕೃಷಿಯ ಮೂಲಕವೇ ಜೀವನ ಸಾಗಿಸುತ್ತಿದ್ದ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ತೆಲಂಗಾಣದ ಲಕ್ಷ್ಮೀಪುರಂ ಗ್ರಾಮದ ಹೆಚ್ಚಿನ ಗ್ರಾಮಸ್ಥರು ಗಾಂಜಾವನ್ನು ಬೆಳೆಸಿ, ಸಂತೆಯಲ್ಲಿ ಮಾರುತ್ತಿದ್ದರು ಎನ್ನಲಾಗಿದೆ.
ಇಲ್ಲಿನ 200ರಷ್ಟು ಕುಟುಂಬಗಳು ಗಾಂಜಾ ಕೃಷಿಯಿಂದಲೇ ಜೀವನ ಸಾಗಿಸುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಇಟ್ಟುಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತಂಜೂರಿನಲ್ಲಿ ಪೊಲೀಸರು ಬಂಧಿಸಿದ್ದು, ನಂತರ ಈ ವಿಚಾರ ಬೆಳಕಿಗೆ ಬಂದಿದೆ. ತಾಜಾ ಗಾಂಜಾ ಸಿಗುತ್ತಿದ್ದುದರಿಂದ ವಿದ್ಯಾರ್ಥಿಗಳು ಈ ಗ್ರಾಮಕ್ಕೆ ಬರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಂಜಾ ಖರೀದಿಸುವ ವಿದ್ಯಾರ್ಥಿಗಳಂತೆ ಪೊಲೀಸರು ಕೃಷಿಸ್ಥಳಕ್ಕೆ ಹೋಗಿದ್ದರು. ಎರಡುಚೀಲ ಗಾಂಜಾವನ್ನು ಹತ್ತು ಸಾವಿರ ರೂ.ಗೆ ಖರೀದಿಸಿದ್ದರು. ನಂತರ 50 ಕಾನ್ ಸ್ಟೇಬಲ್, 10 ಎಸ್ಸೈ, ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್‍ಗಳ ತಂಡ ಗ್ರಾಮವನ್ನು ಸುತ್ತುವರಿದು ಮನೆಗಳ ಮೇಲೆ ದಾಳಿ ನಡೆಸಿತ್ತು.
ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಮೂರು ಗೋಣಿ ಗಾಂಜಾ ಪತ್ತೆಯಾಗಿದೆ. ಹಲವರು ತಾವು ಗಾಂಜಾ ಕೃಷಿ ಮಾಡಿಯೇ ಬುದುಕುತ್ತಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹತ್ತಿ ಮತ್ತು ಅಲಸಂಡೆಯ ನಡುವೆ ಗಾಂಜಾ ಬೆಳೆಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆಂದು ಪೊಲೀಸರು ವಿವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
.jpeg)







