70 ವರ್ಷಗಳ ನಂತರ ವಿದ್ಯುತ್ ಬೆಳಕು ಕಂಡ ಗ್ರಾಮ
ಸ್ವಾತಂತ್ರ್ಯಾನಂತರ ಇಲ್ಲಿರಲಿಲ್ಲ ಬಸ್ ಸಂಚಾರ

ಗಡ್ಚಿರೊಲಿ, ಸೆ.29 : ದೇಶಕ್ಕೆ ಸ್ವಾತಂತ್ರ್ಯ ದೊರೆತು ಬರೋಬ್ಬರಿ 70 ವರ್ಷಗಳಾದ ನಂತರ ಮಹಾರಾಷ್ಟ್ರದ ಅಮ್ದೇಲಿ ಎಂಬ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಹಾಗೂ ಸರಕಾರಿ ಬಸ್ಸುಗಳ ಸೇವೆ ಲಭ್ಯವಾಗಿದೆ.
ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿ ಪ್ರದೇಶದ ಜಿಲ್ಲೆಯಾದ ಗಡ್ಚಿರೊಲಿಯ ಸಿರೊಂಚ ತಾಲೂಕಿನ ಪುಟ್ಟ ಗ್ರಾಮ ಅಮ್ದೇಲಿ ಆಗಿದ್ದು ಅರಣ್ಯದಿಂದ ಸುತ್ತುವರಿದ ಈ ಗ್ರಾಮದಲ್ಲಿ ಸುಮಾರು 200 ಜನರು ವಾಸಿಸುತ್ತಿದ್ದಾರೆ. ಹೆಚ್ಚಿನವರು ತೆಲುಗು ಮಾತನಾಡುವವರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಾಜೇ ಅಂಬರೀಷ್ ರಾವ್ ಆತ್ರಮ್ ಅವರ ಮುತುವರ್ಜಿಯಿಂದ ಈ ಗ್ರಾಮಕ್ಕೆ ರೂ 45 ಲಕ್ಷ ಅನುದಾನ ದೊರಕಿತ್ತು. ಅನುದಾನ ದೊರೆತೊಡನೆ ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಸರಬರಾಜು ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿತ್ತು. ಎರಡೂ ಸೌಕರ್ಯಗಳನ್ನು ಬಿಜೆಪಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಉದ್ಘಾಟಿಸಿದರು. ಸಚಿವರು ಗ್ರಾಮಕ್ಕೆ ರಾಜ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿ ಆಗಮಿಸಿದ್ದರು. ಬಸ್ಸು ಗ್ರಾಮಕ್ಕೆ ಆಗಮಿಸಲು ಒಂದು ತಾತ್ಕಾಲಿಕ ಸೇತುವೆಯನ್ನೂ ಕಾಲುವೆಯೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿತ್ತು.





