ಮೊದಲ ಟೆಸ್ಟ್: 1 ರನ್ ನಿಂದ ಮೊದಲ ದ್ವಿಶತಕ ವಂಚಿತ ಆಫ್ರಿಕದ ಎಲ್ಗರ್

ಜೋಹಾನ್ಸ್ ಬರ್ಗ್ , ಸೆ.29: ಸೆನ್ವೆಸ್ ಪಾರ್ಕ್ ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕದ ಆರಂಭಿಕ ದಾಂಡಿಗ ಡೀನ್ ಎಲ್ಗರ್ ಒಂದು ರನ್ ನಿಂದ ಚೊಚ್ಚಳ ದ್ವಿಶತಕ ವಂಚಿತಗೊಂಡಿದ್ದಾರೆ.
40ನೆ ಟೆಸ್ಟ್ ಆಡುತ್ತಿರುವ 30ರ ಹರೆಯದ ಎಲ್ಗರ್ 199 ರನ್ (388ಎ, 15ಬೌ,3ಸಿ) ಗಳಿಸಿ ಮುಸ್ತಾಫಿಝುರ್ ರಹ್ಮಾನ್ ಎಸೆತದಲ್ಲಿ ಮೊಮಿನುಲ್ ಹಕ್ ಗೆ ಕ್ಯಾಚ್ ನೀಡುವುದರೊಂದಿಗೆ ದ್ವಿಶತಕ ವಂಚಿತಗೊಂಡರು.ಇದರೊಂದಿಗೆ ಎಲ್ಗರ್ 1 ರನ್ ನಿಂದ ದ್ವಿಶತಕ ವಂಚಿತಗೊಂಡ ದಕ್ಷಿಣ ಆಫ್ರಿಕದ ಮೊದಲ ಆಟಗಾರ. ವಿಶ್ವದ 12ನೆ ಆಟಗಾರ ಎನಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಎಲ್ಗರ್ 9ನೆ ಶತಕ ದಾಖಲಿಸಿದ್ದರು.ಹಾಶಿಮ್ ಅಮ್ಲ ಜೊತೆ ಎರಡನೆ ವಿಕೆಟ್ ಗೆ 245 ರನ್ ಗಳ ಜೊತೆಯಾಟ ನೀಡಿದ್ದರು.
34ರ ಹರೆಯದ ಅಮ್ಲ (137) ಅವರು 27ನೆ ಶತಕ ದಾಖಲಿಸಿ ಔಟಾಗಿದ್ದರು. ಅಮ್ಲ ಅವರು ಈ ಸಾಧನೆಯೊಂದಿಗೆ ದಕ್ಷಿಣ ಆಫ್ರಿಕದ ಮಾಜಿ ನಾಯಕ ಗ್ರೇಮ್ ಸ್ಮಿತ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಗರಿಷ್ಠ ಟೆಸ್ಟ್ ಶತಕ ದಾಖಲಿಸಿದ ಜಾಕ್ ಕಾಲಿಸ್ (45) ಬಳಿಕ ಎರಡನೆ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕದ ಆರಂಭಿಕ ದಾಂಡಿಗ ಐಡೆನ್ ಮಾರ್ಕ್ರಾಮ್ (97) ಅವರು 3 ರನ್ ನಿಂದ ಚೊಚ್ಚಳ ಶತಕ ವಂಚಿತಗೊಂಡಿದ್ದರು.
ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ ನಲ್ಲಿ 146 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 496 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.







