ಫೇಕ್ ಫೀಲ್ಡಿಂಗ್‌ಗೆ ದಂಡ!: ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ

ಬ್ರಿಸ್ಬೇನ್, ಸೆ.29:ಕ್ರೀನ್ಸ್‌ಲ್ಯಾಂಡ್‌ನ ಫೀಲ್ಡರ್ ಮಾರ್ನಸ್ ಲ್ಯಾಬಸ್ಚಾಗ್ನೇ ನಕಲಿ (ಫೇಕ್) ಫೀಲ್ಡಿಂಗ್‌ನಿಂದಾಗಿ ದಂಡನೆಗೊಳಗಾಗಿರುವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ವಿಶ್ವ ಕ್ರಿಕೆಟ್‌ನ ನೂತನ ನಿಯಮ ಜಾರಿಗೊಂಡ ಬೆನ್ನಲ್ಲೇ ಮಾರ್ನಸ್ ತಪ್ಪು ಮಾಡಿ ಎದುರಾಳಿ ತಂಡಕ್ಕೆ ಐದು ಪೆನಾಲ್ಟಿ ರನ್ ಬಿಟ್ಟುಕೊಟ್ಟಿದ್ದಾರೆ.
ಇಲ್ಲಿನ ಆ್ಯಲನ್ ಬಾರ್ಡರ್ ಕ್ರಿಡಾಂಗಣದಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ಮತ್ತು ಕ್ವೀನ್ಸ್‌ಲ್ಯಾಂಡ್ ತಂಡಗಳ ನಡುವೆ ಜೆಎಲ್‌ಟಿ ಒನ್-ಡೆ ಕಪ್ ಟೂರ್ನಿಯ ಪಂದ್ಯದಲ್ಲಿ ಇಂತಹ ಘಟನೆ ನಡೆದಿದೆ. ಕ್ರಿಕೆಟ್ ಆಸ್ಟ್ರೇಲಿಯ ತಂಡದ ಬ್ಯಾಟ್ಸ್‌ಮನ್ ಪಾರ್ಮ್ ಅಪ್ಪಾಲ್ ಬ್ಯಾಟಿಂಗ್ ಮಾಡುತ್ತಿದ್ದಾಗ 27ನೆ ಓವರ್‌ನಲ್ಲಿ ಈ ಘಟನೆ ನಡೆದಿದೆ. ಮಾರ್ನಸ್ ಲ್ಯಾಬಸ್ಚಾಗ್ನೇ ಫೀಲ್ಡಿಂಗ್‌ನಲ್ಲಿ ಎಡವಿದರು. ಆದರೆ ಎದುರಾಳಿ ತಂಡದ ದಾಂಡಿಗರನ್ನು ಗೊಂದಲದಲ್ಲಿ ಸಿಲುಕಿಸುವ ಉದ್ದೇಶಕ್ಕಾಗಿ ಬಾಲ್ ಹಿಡಿದಂತೆ ಮತ್ತು ಎಸೆದಂತೆ ನಟಿಸಿದರು. ಆಗ ಅವರಿಗೆ ಕ್ರಿಕೆಟ್‌ನ ಹೊಸ ನಿಯಮದ ನೆನಪಾಯಿತು. ತಾನು ತಪ್ಪು ಮಾಡಿದೆ ಎಂದು ಕೂಡಲೇ ಅವರು ಕೈ ಎತ್ತಿ ಕ್ಷಮೆ ಯಾಚಿಸಿದರು. ಆಗ ಫೀಲ್ಡ್ ಅಂಪೈರ್‌ಗಳಿಬ್ಬರು ಪರಸ್ಪರ ಮಾತುಕತೆ ನಡೆಸಿದರು. ಎಂಸಿಸಿ ಹೊಸ ನಿಯಮ 41.5ರ ಪ್ರಕಾರ ಮಾರ್ನಸ್ ತಪ್ಪು ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಂಪೈರ್ ಪಾಲ್ ವಿಲ್ಸನ್ ದಂಡ ವಿಧಿಸಿದ ಸಿಗ್ನಲ್ ನೀಡಿದರು. ಐದು ಪೆನಾಲ್ಟಿ ರನ್ ಎದುರಾಳಿ ತಂಡದ ಖಾತೆಗೆ ಸೇರ್ಪಡೆಗೊಂಡಿತು.
ಕ್ರಿಕೆಟ್ ಆಸ್ಟ್ರೇಲಿಯ ತಂಡದ ವಿರುದ್ಧ ಈ ಪಂದ್ಯದಲ್ಲಿ ಕ್ವೀನ್ಸ್‌ಲ್ಯಾಂಡ್ 4 ವಿಕೆಟ್‌ಗಳ ಜಯ ಗಳಿಸಿದೆ.
ಮ್ಯಾಟ್ ರೆನ್‌ಶಾ 67 ರನ್ ಮತ್ತು ಮಾರ್ನಸ್ ಲ್ಯಾಬಸ್ಚಾಗ್ನೇ 61 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಇದಕ್ಕೂ ಮೊದಲು ಕ್ರಿಕೆಟ್ ಆಸ್ಟ್ರೇಲಿಯ 7 ವಿಕೆಟ್ ನಷ್ಟದಲ್ಲಿ 279 ರನ್ ಗಳಿಸಿತ್ತು.







