“ನಾನು ಉದ್ಯೋಗಾಕಾಂಕ್ಷಿಯಾಗಿದ್ದರೆ, ಅವರು ವಿತ್ತ ಸಚಿವರಾಗುತ್ತಿರಲಿಲ್ಲ”
ಜೇಟ್ಲಿಯನ್ನು ಕುಟುಕಿದ ಯಶ್ ವಂತ್ ಸಿನ್ಹಾ

ಹೊಸದಿಲ್ಲಿ, ಸೆ.29: 80ನೆ ವಯಸ್ಸಿನಲ್ಲಿ ಯಶ್ ವಂತ್ ಸಿನ್ಹಾ ಉದ್ಯೋಗಕ್ಕೆ ಅರ್ಜಿ ಹಾಕಿದ್ದಾರೆ ಎನ್ನುವ ಅರುಣ್ ಜೇಟ್ಲಿಯವರ ಹೇಳಿಕೆ ಪ್ರತಿಕ್ರಿಯಿಸಿರುವ ಮಾಜಿ ವಿತ್ತ ಸಚಿವ ಯಶ್ ವಂತ್ ಸಿನ್ಹಾ, “ನಾನು ಉದ್ಯೋಗಾಕಾಂಕ್ಷಿಯಾಗಿದ್ದರೆ, ಜೇಟ್ಲಿಯವರು ದೇಶದ ಹಣಕಾಸು ಸಚಿವರಾಗುತ್ತಿರಲಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಒಂದು ಬಾರಿಯೂ ಲೋಕಸಭೆ ಚುನಾವಣೆಯನ್ನು ಗೆಲ್ಲದವರು ನನ್ನ ಪ್ರಶ್ನಿಸುತ್ತಿದ್ದಾರೆ ಹಾಗೂ ಕಪ್ಪು ಹಣ ವಿಚಾರಕ್ಕೆ ಸಂಬಂಧಿಸಿ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಯಶ್ ವಂತ್ ಸಿನ್ಹಾ ಹೇಳಿದ್ದಾರೆ.
“ಒಂದು ವೇಳೆ ನಾನು ಉದ್ಯೋಗಾಕಾಂಕ್ಷಿಯಾಗಿದ್ದರೆ ಅವರು (ಜೇಟ್ಲಿ) ಅಲ್ಲಿರುತ್ತಿರಲಿಲ್ಲ ಎಂದು ಸಿನ್ಹಾ ಜೇಟ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಸಿನ್ಹಾ ಅವರು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರ ಧಾಟಿಯಲ್ಲಿಯೇ ಮಾತನಾಡುತ್ತಿದ್ದಾರೆ. ಚಿದಂಬರಂ ಮತ್ತು ತನ್ನ(ಸಿನ್ಹಾ)ನಡುವಿನ ತೀವ್ರ ವಾಗ್ಯುದ್ಧಗಳನ್ನು ಅವರು ಮರೆತೇಬಿಟ್ಟಿದ್ದಾರೆ ಎಂದು ನಿನ್ನೆ ಜೇಟ್ಲಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಯಶ್ ವಂತ್ ಸಿನ್ಹಾ. “ಚಿದಂಬರಂ ನನ್ನ ಸ್ನೇಹಿತರಲ್ಲ, ಆದರೆ ಅರುಣ್ ಜೇಟ್ಲಿಯವರ ಸ್ನೇಹಿತರು. ಜೇಟ್ಲಿ ನನ್ನ ಹಿನ್ನೆಲೆಯನ್ನು ಮರೆತಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸಿದ ನಂತರ ನಾನು ಹಲವಾರು ಸಂಕಷ್ಟಗಳನ್ನು ಎದುರಿಸಿದ್ದೇನೆ” ಎಂದು ಹೇಳಿದರು.







