ತಂಬಾಕು ಉತ್ಪನ್ನಗಳ ಬಿಡಿ ಮಾರಾಟ ನಿಷೇಧ
ಬೆಂಗಳೂರು, ಸೆ. 30: ಸಿಗರೇಟ್, ಬೀಡಿ, ಚೂಯಿಂಗ್(ಅಗಿಯುವ) ತಂಬಾಕು ಉತ್ಪನ್ನಗಳನ್ನು ಬಿಡಿ-ಬಿಡಿ ಮಾರಾಟವನ್ನು ನಿಷೇಧಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜ್ಯ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಚಯಿಂಗ್ ಟೊಬ್ಯಾಕೋಗಳ ಮೇಲೆ ನಿಷೇಧ ಹೇರಿತ್ತು. ಈ ಕ್ರಮಗಳಿಂದಾಗಿ ಈಗಾಗಲೇ ಧೂಮಪಾನಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆದರೂ, ತಂಬಾಕು ಉತ್ಪನ್ನಗಳ ಬಿಡಿ ಮಾರಾಟದಿಂದಾಗಿ ಧೂಮಪಾನಿಗಳು ಅಂಗಡಿಗಳಿಂದ ಒಂದೆರಡು ಸಿಗರೇಟುಗಳನ್ನು ತೆಗೆದುಕೊಂಡು ನಿರಂತರ ಅಭ್ಯಾಸ ಮಾಡಿಕೊಂಡು ಧೂಮಪಾನ ಮಾಡುವ ದುರಭ್ಯಾಸ ಇನ್ನೂ ುುಂದುವರೆದಿದೆ ಎಂದು ತಿಳಿಸಲಾಗಿದೆ.
ಆರೋಗ್ಯ ಸ್ವಯಂಸೇವಕರು, ಗ್ರಂಥಿಶಾಸ್ತ್ರಜ್ಞರು ಮತ್ತು ಇತರರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಗರೇಟ್, ಬೀಡಿ ಮತ್ತು ಚೂಯಿಂಗ್ ತಂಬಾಕು ಉತ್ಪನ್ನಗಳ ಬಿಡಿ ಮಾರಾಟ ನಿಷೇಧ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
ಸರಕಾರದ ಹೊರಡಿಸಿರುವ ಅಧಿಸೂಚನೆ ಪ್ರಕಾರ ತಂಬಾಕು ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದ್ದು, ಆರೋಗ್ಯ ಸಂರಕ್ಷಣೆ ಅವಶ್ಯಕ. ಆದುದರಿಂದ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಸೆಕ್ಷನ್(3), (8) ಮತ್ತು (9) ರ ಪ್ರಕಾರ ಉಲ್ಲಂಘನೆಯೆಂದು ಪರಿಗಣಿಸಿ ಬಿಡಿ ಬಿಡಿಯಾಗಿ ಮಾರಾಟ ಮಾಡುವುದನ್ನು ನಿಷೇಧಿಸಿದೆ.







