ಬೆಂಗಳೂರು; ಬೈಕ್ ಕಳವು ಪ್ರಕರಣ: ನಾಲ್ವರ ಬಂಧನ

ಬೆಂಗಳೂರು, ಸೆ. 30: ನಕಲಿ ಕೀ ಬಳಸಿ ಬೈಕ್‌ಗಳನ್ನು ಕಳವು ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು 14 ಬೈಕ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಟಿನ್‌ಫ್ಯಾಕ್ಟರಿಯ ಇಮ್ರಾನ್ ಪಾಷಾ(20), ನವಾಝ್ ಖಾನ್(20), ಟಿ.ಸಿ.ಪಾಳ್ಯದ ಸಂಜಯ್(17), ಕೃಷ್ಣನಪಾಳ್ಯದ ಆರಿಫ್(25) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿಗಳು ಕೋರಮಂಗಲದ ವಿಪ್ರೋ ಪಾರ್ಕ್ ಹಿಂಭಾಗದ ರಸ್ತೆಯೊಂದರಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಕಳವು ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಇದಲ್ಲದೆ, ಕೋರಮಂಗಲ ಸುತ್ತಮುತ್ತ ಬೈಕ್ ಕಳವು ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರಿಂದ 7 ಲಕ್ಷ ಮೌಲ್ಯದ 14 ಬೈಕ್‌ಗಳನ್ನು ವಶಪಡಿಸಿಕೊಂಡು ಇಲ್ಲಿನ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story





