ಅ 2. ಮಹತ್ಮಾಗಾಂಧಿ ವಿಚಾರ ಸಂಕಿರಣ
ಮಾನವ ಬಂಧುತ್ವ ವೇದಿಕೆ ಲೋಕಾರ್ಪಣೆ
ಪುತ್ತೂರು, ಸೆ. 30: ಮನುಷ್ಯರ ನಡುವೆ ಪರಸ್ಪರ ವಿಶ್ವಾಸ ಬೆಳೆಸುವ, ಜಾತಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಹಿಂಸಾಚಾರ ವಿರೋಧಿಸಿ ಮಾನವೀಯತೆಯನ್ನು ಪಸರಿಸುವ ಉದ್ದೇಶ ಹೊಂದಿರುವ ಮಾನವ ಬಂಧುತ್ವ ವೇದಿಕೆಯ ಪುತ್ತೂರು ಘಟಕದ ಲೋಕಾರ್ಪಣೆಯು ಅ. 2ರಂದು ಮಹತ್ಮಾಗಾಂಧಿ ವಿಚಾರ ಸಂಕಿರಣ ಆಚರಿಸುವ ಮೂಲಕ ನಡೆಯಲಿದೆ ಎಂದು ಪುತ್ತೂರು ಮಾನವ ಬಂಧುತ್ವ ವೇದಿಕೆಯ ಮುಖ್ಯ ಸಂಚಾಲಕ ಅಮಳ ರಾಮಚಂದ್ರ ತಿಳಿಸಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುತ್ತೂರಿನ ಲಯನ್ಸ್ ಸೇವಾ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತ ದಾರ್ಶನಿಕರ ತತ್ವಗಳನ್ನು ಬಿಟ್ಟು ವ್ಯಕ್ತಿ ಪೂಜೆ ಹೆಚ್ಚಾಗಿದೆ. ಮಹತ್ಮಾ ಗಾಂಧಿ, ವಿವೇಕಾನಂದರು ವಿಶ್ವಕ್ಕೇ ಮಾದರಿ. ಆದರೆ ಅವರ ಚಿಂತನೆಗಳನ್ನು ತಿರುಚುವ ಕೆಲಸ ಇಂದು ನಡೆಯುತ್ತಿದೆ. ಸಮಾಜದಲ್ಲಿ ನಡೆಯುವ ಕೆಟ್ಟದ್ದನ್ನು ತಡೆಯುವ ಮತ್ತು ಮನುಷ್ಯ ಮನುಷ್ಯರ ನಡುವೆ ನೈಜ ಸಂಬಂಧವನ್ನು ಬೆಸೆಯುವ ಕೆಲಸ ಮಾನವಬಂಧುತ್ವ ವೇದಿಕೆ ಕೆಲಸ ಮಾಡಲಿದೆ. ದಾರ್ಶನಿಕರ ನಿಜವಾದ ಚಿಂತನೆಗಳನ್ನು ಪ್ರಚುರಪಡಿಸುವ ಕೆಲಸವೂ ನಡೆಯಲಿದೆ ಎಂದು ಹೇಳಿದರು.
ಗಾಂಧಿ ವಿಚಾರ ಸಂಕಿರಣವನ್ನು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಝೇವಿಯರ್ ಡಿ’ಸೋಜ ವಹಿಸಲಿದ್ದಾರೆ. ಪ್ರಧಾನ ಉಪನ್ಯಾಸವನ್ನು ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಲಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಹಾಸನ ಮಾಡಲಿದ್ದಾರೆ.
ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಹಾಗೂ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಭಾಗವಹಿಸಲಿದ್ದಾರೆ. ಸುದಾನ ದೇವಾಲಯದ ಧರ್ಮಗುರು ವಂ. ವಿಜಯ ಹಾರ್ವಿನ್, ಕೆಐಸಿ ಕುಂಬ್ರದ ಮ್ಯಾನೇಜರ್ ಹುಸೈನ್ ದಾರಿಮಿ, ಪುತ್ತೂರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಚಂದ್ರ ಐ ಕುಂಬ್ರ ಗೌರವ ಉಪಸ್ಥಿತರಾಗಿರುತ್ತಾರೆ.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್‌ಫ್ರೆಡ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಗಾಂಧಿ ವಿಚಾರಗಳ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ನಾರಾಯಣ ಕಿಲಂಗೋಡಿ, ಸಂಚಾಲಕ ಮಹಮ್ಮದ್ ಬಡಗನ್ನೂರು, ಸದಸ್ಯ ರೋಶನ್ ರೈ ಉಪಸ್ಥಿತರಿದ್ದರು.







