ಸಾಲ ಬಾಧೆ : ರೈತ ಆತ್ಮಹತ್ಯೆ

ಹೊನ್ನಾಳಿ,ಸೆ.30:ಬೆಳೆ ಹಾನಿ, ಸಾಲ ಬಾಧೆಯಿಂದ ತೀವ್ರ ಕಂಗಾಲಾಗಿದ್ದ ರೈತನೊಬ್ಬ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೊಡ್ಡೆರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ದೊಡ್ಡೆರೇಹಳ್ಳಿ ಗ್ರಾಮದ ಅಣಜೇರ ಗಂಗಾಧರ್(36) ಮೃತ ರೈತ. 13 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ ರೈತ ಅಣಜೇರ ಗಂಗಾಧರ್ ಇದಕ್ಕಾಗಿ ಖಾಸಗಿ ಲೇವಾದೇವಿದಾರರಿಂದ ಹಾಗೂ ಬ್ಯಾಂಕ್‍ಗಳಲ್ಲಿ ಸುಮಾರು 5 ಲಕ್ಷದಷ್ಟು ಸಾಲ ಮಾಡಿದ್ದ. ಕಳೆದ ಮೂರ್ನಾಲ್ಕು ವರ್ಷಗಳ ಬರಗಾಲದಿಂದ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದ. ತುಂಗಾ ಮೇಲ್ದಂಡೆ ಮುಖ್ಯ ನಾಲೆಯಿಂದ ತನ್ನ ಜಮೀನಿನವರೆಗೆ ಸುಮಾರು 300 ಪೈಪ್‍ಗಳನ್ನು ಅಳವಡಿಸಿಕೊಂಡು ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದ. ಇದಕ್ಕಾಗಿಯೂ ಸಾಲ ಮಾಡಿದ್ದ. ಇಷ್ಟಾದರೂ, ಬೆಳೆ ಕೈಗೆ ಬರಲಿಲ್ಲವಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಣಜೇರ ಗಂಗಾಧರ್ ಸುಮಾರು ಆರು ವರ್ಷಗಳ ಹಿಂದೆ ಅಪಘಾತದಲ್ಲಿ ಒಂದು ಕೈ ಹಾಗೂ ಕಾಲನ್ನು ಕಳೆದುಕೊಂಡಿದ್ದ. ಅಪಘಾತದ ನಂತರ ಸ್ವಗ್ರಾಮ ದೊಡ್ಡೆರೇಹಳ್ಳಿಗೆ ಮರಳಿ, ಅಂಗವೈಕಲ್ಯವನ್ನೂ ಲೆಕ್ಕಿಸದೇ ಬೇಸಾಯದಲ್ಲಿ ತೊಡಗಿದ್ದ. ಮರಣೋತ್ತರ ಪರೀಕ್ಷೆಯ ಬಳಿಕ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.





