ಆರದವಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿಯ “ಅಂಬು” ಹೊಡೆಯುವ ಮಹೋತ್ಸವ

ಚಿಕ್ಕಮಗಳೂರು, ಸೆ.30: ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಮಾರಮ್ಮದೇವಿ ಹಾಗೂ ಭೂತಪ್ಪಸ್ವಾಮಿ ಉತ್ಸವದ ಜತೆಗೆ ವಿಜಯದಶಮಿ ಅಂಗವಾಗಿ ಶ್ರೀ ಆಂಜನೇಯಸ್ವಾಮಿಯ “ಅಂಬು” ಹೊಡೆಯುವ ಮಹೋತ್ಸವ ಗ್ರಾಮಸ್ಥರ ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು.
ವಿಜಯದಶಮಿ ಅಂಗವಾಗಿ ಅಂಬು ಹೊಡೆಯುವ ಕಾರ್ಯಕ್ರಮವನ್ನು ಗ್ರಾಮದ ಪಟೇಲರ ವಂಶಸ್ಥ ಕರ್ನಾಟಕ ಸರ್ಕಾರ ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ನೆರವೇರಿಸಿದರು. ಕಾರ್ಯಕ್ರಮಕ್ಕೂ ಮೊದಲು ಪಟೇಲರ ವಂಶಸ್ಥ ಎ.ಎನ್.ಮಹೇಶ್ ಮತ್ತು ಕುಟುಂಬಸ್ಥರು ಹಾಗೂ ಮುಖಂಡರನ್ನು ಗ್ರಾಮಸ್ಥರು ಅವರ ಮನೆಗೆ ತೆರಳಿ ಸಂಪ್ರದಾಯಿಕವಾಗಿ ಪೂಜೆ ವಿಧಿ ವಿಧಾನಗಳನ್ನು ನಡೆಸಿಕೊಡಲು ಆಹ್ವಾನಿಸಿದರು.
ನಂತರ ಸಾಂಪ್ರದಾಯಿಕ ಉಡುಗೆ ಧರಿಸಿದ ಎ.ಎನ್.ಮಹೇಶ್, ಕುಟುಂಬಸ್ಥರು ಹಾಗೂ ಅತಿಥಿಗಳನ್ನು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಐ.ಬಿ.ಶಂಕರ್ ಹಾಗೂ ಕಾಫಿ ಮಂಡಳಿ ಮಾಜಿ ಸದಸ್ಯ ಉಮಾ ಐ.ಬಿ.ಶಂಕರ್ ಮತ್ತಿತರರಿದ್ದರು.
ಗ್ರಾಮ ದೇವೆತೆಗಳಿಗೆ ಪೂಜೆ ಸಲ್ಲಿಸಿ ‘ಬನ್ನಿ’ ಮರದ ಬಳಿ “ಶಮಿ” ಪೂಜೆ ನೆರವೇರಿಸಿದ ಎ.ಎನ್.ಮಹೇಶ್ ನಂತರ ಊರಿನ ದೊಡ್ಡಕೆರೆ ಬಳಿ ಏರ್ಪಡಿಸಿದ್ದ “ಅಂಬು” ಹೊಡೆಯುವ ಸಾಂಪ್ರಾದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆಯುವ ಮೂಲಕ ತುಂಡರಿಸಿದರು. ನಂತರ ಮಾಜಿ ಶಾಸಕ ಐ.ಬಿ.ಶಂಕರ್ ಸೇರಿದಂತೆ ಗ್ರಾಮಸ್ಥರೊಂದಿಗೆ ವಾದ್ಯಗೋಷ್ಠಿಗೆ ಹೆಜ್ಜೆ ಹಾಕಿದರು.
ಅಂಬು ಹೊಡೆವ ಕಾರ್ಯದ ವೇಳೆ ಎ.ಎನ್. ಮಹೇಶ್ ಮಾತನಾಡಿ, ನಾಡಿನಾದ್ಯಂತ ವಿಜಯದಶಮಿಯನ್ನು ವಿಜಯ ಸಂಕೇತವಾಗಿ ಆಚರಿಸುತ್ತಿದ್ದು ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆಯ ಕುರುಹು ಇದಾಗಿದೆ. ಇಂದು ರಾಜಕೀಯ ರಂಗ ಸೇರಿದಂತೆ ಎಲ್ಲಡೆ ದುಷ್ಟರ ಸಂಖ್ಯೆ ಹೆಚ್ಚಿದ್ದು ಇದರ ದಮನಕ್ಕೆ ಎಲ್ಲರೂ ಸೇರಿ ಸಂಕಲ್ಪ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಮಾಜಿ ಶಾಸಕ ಐ.ಬಿ.ಶಂಕರ್ ರವರು ಮಾತನಾಡಿ, ಊರಿನಲ್ಲಿ ಒಗ್ಗಟ್ಟು ಮೂಡಬೇಕಾದರೆ ಇಂತಹ ಕಾರ್ಯಕ್ರಮಗಳು ಎಲ್ಲಾ ಗ್ರಾಮಗಳಲ್ಲಿಯೂ ನಡೆಯಬೇಕು. ಕಳೆದ 20 ವರ್ಷಗಳಿಂದ ನಡೆಯುತ್ತಿರುವ ವಿಜಯದಶಮಿ ಉತ್ಸವ ನಿರಂತರವಾಗಿ ನಡೆಯಬೇಕು. ಅದಕ್ಕೆ ಗ್ರಾಮಸ್ಥರೆಲ್ಲರೂ ಸಹಕರಿಸಬೇಕು. ಭಗವಂತನ ಕೃಪೆಯಿಂದ ಈ ಬಾರಿ ಮಳೆಬೆಳೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸೋಣ ಎಂದರು.
ಕಾರ್ಯಕ್ರಮದಲ್ಲಿ ಉಮಾ ಐ.ಬಿ.ಶಂಕರ್, ಗ್ರಾಪಂ ಅಧ್ಯಕ್ಷ ಎ.ಎಂ.ಕುಮಾರ್, ಉಪಾಧ್ಯಕ್ಷ ಮಲ್ಲೇಗೌಡ, ಸದಸ್ಯ ಎ.ಬಿ.ಜಯಣ್ಣ, ನಿಂಗೇಗೌಡ, ದ್ರಾಕ್ಷಾಯಿಣಿ ನಿಂಗೇಗೌಡ, ಜಯಣ್ಣ, ನಾಗರಾಜಣ್ಣ, ಎ.ಎಂ.ನಟರಾಜ್, ಎ.ಬಿ.ಯೋಗೇಶ್, ಜೇತನ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಣೆ ವೀರಭದ್ರಾಚಾರ್, ಪ್ರಾರ್ಥನೆ ಶೋಭಾ ಹಾಡಿದರು.







