ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಮದ್ದೂರು, ಸೆ.30: ತಾಲೂಕಿನ ನಗರಕೆರೆ ಗ್ರಾಮದಲ್ಲಿ ಕ್ಷುಲಕ ವಿಚಾರಕ್ಕೆ ಆರಂಭಗೊಂಡ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಇಟ್ಟಿಗೆ ಕಾರ್ಖಾನೆ ಮಾಲಕ ಜನಾರ್ಧನ(33) ಕೊಲೆಯಾದ ವ್ಯಕ್ತಿಯಾಗಿದ್ದು, ಕೊಲೆ ಮಾಡಿದ ಮರದ ವ್ಯಾಪಾರಿ ಶೇಖರ್ ಪರಾರಿಯಾಗಿದ್ದಾನೆ. ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಶೇಖರ್ ಮತ್ತು ಜನಾರ್ಧನ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆಯುತ್ತಿದ್ದು, ಶುಕ್ರವಾರ ತಡರಾತ್ರಿಯೂ ಜಗಳ ವಿಕೋಪಕ್ಕೆ ತಿರುಗಿ ಶೇಖರ್ ಮಾರಕಾಸ್ತ್ರದಿಂದ ಜನಾರ್ಧನ್ ಹೊಟ್ಟೆಯ ಮೇಲೆ ಹೊಡೆದ ಎನ್ನಲಾಗಿದೆ.
ಕುಸಿದುಬಿದ್ದ ಜನಾರ್ಧನರನ್ನು ಕೂಡಲೇ ಮದ್ದೂರಿನ ಸರಕಾರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮದ್ದೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.





