ಆದಿಕೇಶವಲು ಮೊಮ್ಮಗ ಆಸ್ಪತ್ರೆಯಿಂದ ಪರಾರಿ: ಎಫ್‌ಐಆರ್ ದಾಖಲು

ಬೆಂಗಳೂರು, ಸೆ.30: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿದ್ದ ಪ್ರಕರಣ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದ ಆಂಧ್ರ ಪ್ರದೇಶದ ಹಿರಿಯ ರಾಜಕಾರಣಿ ದಿ.ಆದಿಕೇಶವಲು ಅವರ ಮೊಮ್ಮಗ ವಿಷ್ಣು ಆಸ್ಪತ್ರೆಯಿಂದಲೇ ಪರಾರಿಯಾಗಿರುವುದಾಗಿ ಹೇಳಲಾಗುತ್ತಿದ್ದು, ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ.
ಸೆ.27ರ ಮಧ್ಯರಾತ್ರಿ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಅತಿವೇಗವಾಗಿ ಬಂದಿದ್ದ ವಿಷ್ಣು ಮಾರುತಿ ಓಮ್ನಿ ಕಾರಿಗೆ ಢಿಕ್ಕಿ ಹೊಡೆದಿದ್ದ, ಪರಿಣಾಮ ಸ್ಥಳೀಯರು ಆತನನ್ನು ಥಳಿಸಿದ್ದರು.ಜೊತೆಗೆ ಕಾರಿನಲ್ಲಿ ಗಾಂಜಾ ಕೂಡ ಪತ್ತೆಯಾಗಿತ್ತು ಎನ್ನಲಾಗಿದೆ. ಈ ಸಂಬಂಧ ಜಯನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಷ್ಣುನನ್ನು ನಗರದ ಮಲ್ಯ ಆಸ್ಪತ್ರೆ ದಾಖಲಿಸಲಾಗಿತ್ತು.
ಪೊಲೀಸರ ವಶದಲ್ಲಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಷ್ಣು ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಐಪಿಸಿ ಸೆಕ್ಷನ್ 224ರ ಅಡಿಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 5 ಗಂಟೆ ವೇಳೆಗೆ ಪೊಲೀಸರು ಪರಿಶೀಲಿಸಿದಾಗ ವಿಷ್ಣು ವಾರ್ಡನಲ್ಲೇ ಇದ್ದ. ಆದರೆ, ಆತ 6 ಗಂಟೆ 10 ನಿಮಿಷದಿಂದ 6 ಗಂಟೆ 15 ನಿಮಿಷದ ಅವಧಿಯಲ್ಲಿ ಆಸ್ಪತ್ರೆಯ ಎರಡನೆ ಮಹಡಿಯ ತುರ್ತು ನಿರ್ಗಮನ ದ್ವಾರದಿಂದ ಪರಾರಿಯಾಗಿದ್ದಾನೆ. ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರದಲ್ಲಿ ದೃಶ್ಯಾವಳಿ ಸೆರೆಯಾಗಿವೆ.ಅಲ್ಲದೆ, ಆ ವಾರ್ಡ್‌ನಲ್ಲಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಪರಿಶೀಲನೆ: ಪ್ರಕರಣ ಸಂಬಂಧ ಸಿಸಿಟವಿ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಿದಾಗ, ಆರೋಪಿ ವಿಷ್ಣು ಜೊತೆ ಮತ್ತೋರ್ವ ವ್ಯಕ್ತಿಯೂ ಕಾಣಿಸಿಕೊಂಡಿದ್ದು, ವಿಷ್ಣು ತಪ್ಪಿಸಿಕೊಳ್ಳಲು ಆತನೆ ಸಹಾಯ ಮಾಡಿದ್ದಾನೆ. ವೀಡಿಯೊದಲ್ಲಿ ಇರುವುದು ಆಸ್ಪತ್ರೆ ಸಿಬ್ಬಂದಿಯೋ ಅಥವಾ ವಿಷ್ಣುವಿನ ತಂದೆಯೋ ಎಂಬ ಸಂಶಯವಿದ್ದು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.
ವಿಶೇಷ ತಂಡ ರಚನೆ: ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ವಿಷ್ಣು ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಗೆ ತಂಡವನ್ನು ಕಳುಹಿಸಲಾಗಿದೆ.ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.







