ರಾಜ್ಯದ 10 ಸಾವಿರಕ್ಕೂ ಹೆಚ್ಚು ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ
ಅ.2ಕ್ಕೆ ‘ಗಾಂಧಿ ಗ್ರಾಮ ಪುರಸ್ಕಾರ’ ಸಮಾರಂಭ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ. 30: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತ್ಯುತ್ಸವದ ಸಂದರ್ಭದಲ್ಲಿ ರಾಜ್ಯದ 1900ಕ್ಕೂ ಹೆಚ್ಚು ಗ್ರಾ.ಪಂ.ಗಳು ಬಯಲು ಬಹಿರ್ದೆಸೆ ಮುಕ್ತಗೊಂಡು ಆರೋಗ್ಯವಂತ ಕರ್ನಾಟಕ ನಿರ್ಮಾಣದತ್ತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
2016ರ ಅಕ್ಟೋಬರ್ 2ರಂದು 1 ಸಾವಿರ ಗ್ರಾ.ಪಂ.ಗಳು ಮತ್ತು 5 ಸಾವಿರಕ್ಕೂ ಹೆಚ್ಚು ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತಗೊಂಡು ಆರೋಗ್ಯವಂತ ಗ್ರಾಮೀಣ ಕರ್ನಾಟಕದ ನೈರ್ಮಲ್ಯದ ಸಮರಕ್ಕೆ ಬಹುದೊಡ್ಡ ಫಲಶೃತಿಯನ್ನು ತಂದುಕೊಟ್ಟಿದ್ದವು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.
ಅದೇ ರೀತಿ ಇದೀಗ ಒಂದು ವರ್ಷದ ನಂತರ ಈಗ ಮತ್ತೆ 57ತಾಲೂಕುಗಳು, 1900ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳು ಹಾಗೂ 10 ಸಾವಿರಕ್ಕೂ ಹೆಚ್ಚು ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತಗೊಳ್ಳುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹೇಳಿದೆ.
ಕಳೆದ ವರ್ಷ ಬಯಲು ಬಹಿರ್ದೆಸೆ ಮುಕ್ತ ಘೋಷಣೆಯಾಗಿದ್ದ 5 ಜಿಲ್ಲೆಗಳನ್ನು ಹೊರತುಪಡಿಸಿ ಬಾಕಿ ಉಳಿದ 25 ಜಿಲ್ಲೆಗಳ ಪೈಕಿ ರಾಮನಗರ, ಮಂಡ್ಯ, ಕೋಲಾರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳು ಪ್ರಸ್ತುತ ಸಾಲಿನಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳ್ಳುತ್ತಿವೆ.
ಇನ್ನುಳಿದ ಜಿಲ್ಲೆಗಳಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಉದ್ದೇಶದಿಂದ 2013ರಲ್ಲಿ ಪ್ರಾರಂಭಿಸಲಾದ ಶೌಚಾಲಯಕ್ಕಾಗಿ ಸಮರ ಫಲ ನೀಡುತ್ತಿದೆ. ಮಿಷನ್ ಮೋಡ್ನಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ಸ್ಪೂರ್ತಿ ಮತ್ತು ಪ್ರೇರಣೆಯಿಂದ ನಿರ್ವಹಿಸಿದ್ದಕ್ಕಾಗಿ 4 ವರ್ಷ 4 ತಿಂಗಳಲ್ಲಿ 31.12 ಲಕ್ಷ ಶೌಚಾಲಯಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಿಸಿ ದಾಖಲೆಯ ಸಾಧನೆಗೈಯಲಾಗಿದೆ.
ಉತ್ತರ ಕನ್ನಡ, ಚಿಕ್ಕಮಗಳೂರು, ವಿಜಯಪುರ, ಕೊಪ್ಪಳ, ಹಾವೇರಿ, ದಾವಣಗೆರೆ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ ಗುರಿಯನ್ನು ತಲುಪುವ ಹಾದಿಯಲ್ಲಿ ದಾಪುಗಾಲನ್ನಿಟ್ಟಿವೆ. ಈ ಜಿಲ್ಲೆಗಳೂ ಡಿಸೆಂಬರ್ ಅಂತ್ಯದ ವೇಳೆಗೆ ಬಯಲು ಬಹಿರ್ದೆಸೆ ಮುಕ್ತಗೊಳ್ಳುವ ಎಲ್ಲ ಸಾಧ್ಯತೆಗಳೂ ನಿಶ್ಚಳವಾಗಿವೆ. ಇಡೀ ಗ್ರಾಮೀಣ ಕರ್ನಾಟಕವನ್ನು 2018ರ ಮಾರ್ಚ್ 31 ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಉದ್ದೇಶ ರಾಜ್ಯ ಸರಕಾರಕ್ಕಿದೆ ಎಂದು ಹೇಳಲಾಗಿದೆ.
ಗಾಂಧಿ ಗ್ರಾಮ ಪುರಸ್ಕಾರ:ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2013-14ನೆ ಸಾಲಿನಿಂದ ಪ್ರತಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿರುವ ಒಂದು ಗ್ರಾ.ಪಂ.ಯನ್ನು ಗುರುತಿಸಿ ಅವುಗಳನ್ನು ಪುರಸ್ಕರಿಸಲು ‘ಗಾಂಧಿ ಗ್ರಾಮ ಪುರಸ್ಕಾರ’ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಪುರಸ್ಕೃತ ಗ್ರಾ.ಪಂ.ಗೆ ತಲಾ 5ಲಕ್ಷ ರೂ.ಬಹುಮಾನ ನೀಡಲಾಗುತ್ತಿದೆ.
ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಗ್ರಾಮ ಪಂಚಾಯತ್ ಗಳನ್ನು ಆಯ್ಕೆ ಮಾಡಲು ವಿವಿಧ ಮಾನದಂಡಗಳನ್ನು ನಿಗದಿಪಡಿಸಿ, ಎನ್ಐಸಿ ಮೂಲಕ ಸಿದ್ಧಪಡಿಸಲಾದ ತಂತ್ರಾಂಶದಿಂದ ಪಂಚತಂತ್ರ ತಂತ್ರಾಂಶದ ಮೂಲಕ ರಾಜ್ಯದ ಎಲ್ಲ ಗ್ರಾ. ಪಂ. ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
ಈ ತಂತ್ರಾಂಶದ ಮುಖಾಂತರ ಉತ್ತರಿಸಿ, ಪ್ರತಿ ತಾಲೂಕಿಗೆ ಅತಿಹೆಚ್ಚು ಅಂಕ ಗಳಿಸಿರುವ ಮೂರು ಗ್ರಾ.ಪಂ.ಗಳು ಅರ್ಹತೆ ಪಡೆಯಲಿವೆ. ಅರ್ಹ ಗ್ರಾ.ಪಂ.ಗಳ ಸ್ಥಳ, ದಾಖಲಾತಿ ಪರಿಶೀಲನೆ ಮಾಡಿ, ಆಯಾ ಜಿ.ಪಂ. ಸಿಇಓ ಅಧ್ಯಕ್ಷತೆಯಲ್ಲಿನ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ತಾಲೂಕಿಗೆ ಒಂದರಂತೆ ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ರಾಜ್ಯ ಮಟ್ಟದ ಪರಾಮರ್ಶೆ ಸಮಿತಿಯ ಮೂಲಕ ಅಂತಿಮಗೊಳಿಸಲಾಗುತ್ತದೆ.
2013-14ನೆ ಸಾಲಿಗೆ 159 ಗ್ರಾ.ಪಂ.ಗಳನ್ನು, 2014-15ನೆ ಸಾಲಿಗೆ 176 ಗ್ರಾ.ಪಂ. ಗಳನ್ನು ಹಾಗೂ 2015-16ನೆ ಸಾಲಿಗೆ 176 ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ಪುರಸ್ಕರಿಸಲಾಗಿದೆ. 2016-17ನೆ ಸಾಲಿನಲ್ಲಿ ತಾಲೂಕಿಗೆ ಒಂದರಂತೆ 176 ಗ್ರಾ.ಪಂ. ಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯು ಗ್ರಾಮೀಣಾಭಿವೃದ್ಧಿ ಕಲ್ಪನೆಗಳನ್ನು ಪುನರ್ ವ್ಯಾಖ್ಯಾನಗೊಳಿಸಿ ಆಂದೋಲನದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಸರಕಾರದ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಎಲ್ಲ ಪಂಚಾಯ್ತಿಗಳಿಗೂ ಒಂದಿಲ್ಲೊಂದು ರೀತಿಯ ಪ್ರೋತ್ಸಾಹ-ಪುರಸ್ಕಾರಗಳನ್ನು ಪ್ರತಿವರ್ಷ ನೀಡಲಾಗುತ್ತಿದ್ದು, ತನ್ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಗುಣಾತ್ಮಕ ಬದಲಾವಣೆಗೆ ನಾಂದಿ ಹಾಡಲಾಗಿದೆ.
ಪುರಸ್ಕಾರ ಸಮಾರಂಭ
‘ಅ.2ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ತ್ರಿಪುರವಾಸಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಂಡ 176 ಗ್ರಾ.ಪಂ. ಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಪದ್ಮಶ್ರೀ ಬಿಂದೇಶ್ವರ ಪಾಠಕ್, ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ’







