ಭಾರತ-ಚೀನಾ ಹೊಸ ಅಧ್ಯಾಯ ಆರಂಭಿಸಬೇಕು: ಚೀನಾ ರಾಯಭಾರಿ

ಹೊಸದಿಲ್ಲಿ, ಸೆ.30: ಭಾರತ ಮತ್ತು ಚೀನಾಗಳು ತಮ್ಮ ಹಳೆಯ ಪುಟಗಳನ್ನು ತಿರುವಿಹಾಕಿ ಹೊಸ ಅಧ್ಯಾಯವನ್ನು ಆರಂಭಿಸುವ ಸಮಯ ಇದೀಗ ಕೂಡಿಬಂದಿದೆ ಎಂದು ಚೀನಾದ ರಾಯಭಾರಿ ಲು ಝಹುಯಿ ಹೇಳಿದ್ದು ಎರಡೂ ದೇಶಗಳು ದ್ವಿಪಕ್ಷೀಯ ಮಟ್ಟದಲ್ಲಿ ತುಂಬಾ ಮುನ್ನಡೆ ಸಾಧಿಸಿವೆ ಎಂದಿದ್ದಾರೆ.
ಈ ತಿಂಗಳಾರಂಭದಲ್ಲಿ ಕ್ಸಿಯಮೆನ್‌ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗಸಭೆಯ ಸಂದರ್ಭ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು, ಈ ವೇಳೆ ಉಭಯ ನಾಯಕರೂ ಸಾಮರಸ್ಯದ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಝುಹುಯಿ ಹೇಳಿದರು. ಹಳೆಯ ಪುಟಗಳನ್ನು ಮಗುಚಿ ಹಾಕಿ, ಅದೇ ದಿಕ್ಕು ಹಾಗೂ ವೇಗದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕಿದೆ. ಒಂದು ಮತ್ತು ಒಂದು ಕೂಡಿದರೆ ಹನ್ನೊಂದು ಎಂಬಂತೆ ಮಾಡಬೇಕಿದೆ. ಚೀನಾವು ಭಾರತದ ಬಹುದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ದ್ವಿಪಕ್ಷೀಯ ಮಟ್ಟವಷ್ಟೇ ಅಲ್ಲ, ಅಂತರಾಷ್ಟ್ರೀಯ, ಪ್ರಾದೇಶಿಕ ವ್ಯವಹಾರದಲ್ಲೂ ನಾವು ಬಹಳ ಮುನ್ನಡೆ ಸಾಧಿಸಿದ್ದೇವೆ ಎಂದವರು ಹೇಳಿದರು.
‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ದ 68ನೇ ವರ್ಷಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ತನ್ನ ಭಾಷಣದ ಸಂದರ್ಭ ಝುಹುಯಿ ತನ್ನ ಗುರುಗಳಾದ ಪ್ರೊ ಕ್ಸು ಫಂಚೆಂಗ್‌ರನ್ನು ಸ್ಮರಿಸಿಕೊಂಡರು. 1945ರಿಂದ 1978ರವರೆಗೆ ಪುದುಚೇರಿಯ ಅರಬಿಂದೊ ಆಶ್ರಮದಲ್ಲಿದ್ದ ಕ್ಸು ಫಂಚೆಂಗ್, ಉಪನಿಷದ್, ಭಗವದ್ಗೀತೆ ಹಾಗೂ ಶಾಕುಂತಳವನ್ನು ಸಂಸ್ಕೃತದಿಂದ ಚೀನೀ ಭಾಷೆಗೆ ಅನುವಾದಿಸಿದ್ದರು.
ದ್ವಿಪಕ್ಷೀಯ ಸ್ನೇಹಸಂಬಂಧ ವಿಷಯಕ್ಕೆ ಬಂದರೆ ಪ್ರೊ ಕ್ಸು ಫಂಚೆಂಗ್, ಬೌದ್ಧ ಸನ್ಯಾಸಿ ಬೋಧಿಮಿತ್ರ, 3ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಬೌದ್ಧ ಸನ್ಯಾಸಿ ಫಾಕ್ಸಿಯಾನ್, ರವೀಂದ್ರನಾಥ್ ಠಾಗೋರ್ ಅವರಂತಹ ಸಾವಿರಾರು ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಹೆಸರಿಸಬಹುದು . ಈ ಮಹಾನ್ ವ್ಯಕ್ತಿಗಳು ನೀಡಿರುವ ಕೊಡುಗೆ ಹಾಗೂ ಹಾಕಿಕೊಟ್ಟಿರುವ ಪರಂಪರೆಯನ್ನು ಎಂದಿಗೂ ಮರೆಯಬಾರದು . ಈ ಮಹಾನ್ ವ್ಯಕ್ತಿಗಳ ಹೆಗಲ ಮೇಲೆ ನಿಂತುಕೊಂಡು ನಾವಿಂದು ಇನ್ನಷ್ಟು ಕಾರ್ಯ ಮಾಡಬೇಕಿದೆ ಎಂದವರು ಹೇಳಿದರು.
ಬೀಜಿಂಗ್- ಶಾಂಘೈ ಮಧ್ಯೆ ಸಂಚರಿಸುವ ಚೀನಾದ ಹೈಸ್ಪೀಡ್ ಬುಲೆಟ್ ಟ್ರೈನ್‌ನ ವೇಗವನ್ನು ಗಂಟೆಗೆ 300 ಕಿ.ಮೀ.ಯಿಂದ 350 ಕಿ.ಮೀಗೆ ಹೆಚ್ಚಿಸಲಾಗಿದೆ ಎಂದು ಇದೇ ಸಂದರ್ಭ ಅವರು ತಿಳಿಸಿದರು. ಚೀನಾದ ಇತ್ತೀಚಿಗಿನ ನಾಲ್ಕು ಪ್ರಮುಖ ಸಂಶೋಧನೆಗಳಲ್ಲಿ ಹೈಸ್ಪೀಡ್ ರೈಲು ಸೇರಿದೆ . ಗಂಟೆಗೆ 1,000 ದಿಂದ 4,000 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ‘ಹೈಪರ್‌ಲೂಪ್’ ರೈಲು ಸಂಚಾರದ ಕಾರ್ಯಸಾಧ್ಯತೆಯ ಅಧ್ಯಯನ ಆರಂಭಿಸಲಾಗಿದೆ ಎಂದವರು ಹೇಳಿದರು.







