ಬ್ರಹ್ಮಾವ: 'ಸುಸ್ಥಿರ ಕೃಷಿಗೆ ಸಮಗ್ರ ಕೃಷಿ' ಕಾರ್ಯಕ್ರಮ

ಉಡುಪಿ, ಸೆ.30: ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೊಟಗಾರಿಕೆ ವಿವಿ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಮತ್ತು ಇತರ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ, ಸುಸ್ಥಿರ ಕೃಷಿಗೆ ಸಮಗ್ರ ಕೃಷಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಪೆರ್ಡೂರಿನ ಪ್ರಗತಿಪರ ರೈತ ಶಬರೀಶ್ ಅವರು ಡಾ. ಜಿ. ಕೆ. ವೀರೇಶ್ ಎಂಡೋಮೆಂಟ್ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಜಮೀನಿನಲ್ಲಿ ಹಮ್ಮಿಕೊಳ್ಳಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಗ್ರ ಕೃಷಿಯ ವೀಕ್ಷಣೆ ಮತ್ತು ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಡಾ.ಜಿ.ಕೆ.ವೀರೇಶ ಉದ್ಘಾಟಿಸಿದರು. ಎಂಡೋಮೆಂಟ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಎಸ್.ವಿ.ಆರ್ ಶೆಟ್ಟಿ ಸಮಗ್ರ ಕೃಷಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಶಬರೀಶ್ ಸುವರ್ಣ ಇವರು ತಮ್ಮ ಕೃಷಿಯ ಅನುಭವವನ್ನು ಹಂಚಿಕೊಂಡರು. ತಮ್ಮ 25 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿದ್ದು ಇದರಲ್ಲಿ 4 ಎಕರೆ ಶ್ರೀಗಂಧ, 12 ಎಕರೆ ರಬ್ಬರ್, 4 ಎಕರೆ ಭತ್ತ ಇವೆಲ್ಲದರ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ, ಆಡು ಸಾಕಣಿಕೆ, ನಾಟಿ ಕೋಳಿ ಸಾಕಾಣಿಕೆ ಮತ್ತು ಜೇನು ಕೃಷಿ ಹೀಗೆ ಎಲ್ಲ ಕೃಷಿಯನ್ನು ಮಾಡುತ್ತಿರುವುದಾಗಿ ಅವರು ವಿವರಿಸಿದರು. ಒಂದು ಕೃಷಿಯಿಂದ ನಷ್ಟವಾದರೆ, ಮತ್ತೊಂದು ಕೃಷಿಯಲ್ಲಿ ಲಾಭ ಬರುತ್ತಿದೆ. ಈ ರೀತಿ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ವಿವಿಧ ಕೃಷಿ ಅನುಸರಿಸಿದರೆ ಖಂಡಿತವಾಗಿ ಕೃಷಿಯಲ್ಲಿ ಲಾಭವಿದೆ ಎಂದವರು ವಿಶ್ವಾಸದಿಂದ ನುಡಿದರು.
ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಸಮಗ್ರ ಕೃಷಿ ಪದ್ದತಿಯನ್ನು ಹೇಗೆ ಅಳವಡಿಸಿಕೊಳ್ಳುವ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ಬಿ. ಧನಂಜಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್, ಕೃಷಿ ಮತ್ತು ತೋಟಗಾರಿಕೆಹಾಗೂ ಪಶುಪಾಲನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







