ಜ್ಯೋತಿಷಿಗಳ ವಂಚನೆ: ಎಸ್ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರು

ಉಡುಪಿ, ಸೆ.28: ಉಡುಪಿ ನಗರದ ಹೊಟೇಲ್/ಲಾಡ್ಜ್‌ಗಳಲ್ಲಿ ನೆಲೆಸಿ ರುವ ಕೆಲವು ನಕಲಿ ಜ್ಯೋತಿಷಿಗಳು ಸಮಸ್ಯೆ ಪರಿಹರಿಸುತ್ತೇವೆ ಎಂದು ಹೇಳಿ ಜನರಿಂದ ಹಣ ಪಡೆದು ವಂಚನೆ ಮತ್ತು ಸುಳ್ಳು ಪರಿಹಾರದ ಭರವಸೆ ನೀಡಿ ಮೋಸ ಮಾಡುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಉಡುಪಿಯ ಸಾರ್ವಜನಿಕರೊಬ್ಬರು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಅವರ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರಿ ಕೊಂಡರು.
ಬ್ರಹ್ಮಾವರ ಮಂದಾರ್ತಿ ದೇವಸ್ಥಾನದ ಬಳಿಯ ಟ್ಯಾಕ್ಸಿ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಅಕ್ರಮವಾಗಿ ಬಾಡಿಗೆ ಮಾಡುತ್ತಿರುವುದರಿಂದ ತೆರಿಗೆ ಪಾವತಿ ಸುವ ಟ್ಯಾಕ್ಸಿಯವರಿಗೆ ತೊಂದರೆಯಾಗುತ್ತಿದೆ ಎಂದು ಚಾಲಕರೊಬ್ಬರು ದೂರಿ ಕೊಂಡರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ನಿರೀಕ್ಷಕರಿಗೆ ಸೂಚಿಸಿದ ಎಸ್ಪಿ, ಅಂತಹ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಆರ್‌ಟಿಓ ಅವರಿಗೆ ಒಪ್ಪಿಸು ವಂತೆ ತಿಳಿಸಿದರು.
ಉಡುಪಿ ನಗರ ಮೆಡಿಕಲ್‌ಗಳಲ್ಲಿ ವೈದ್ಯರ ಸಲಹಾ ಪಟ್ಟಿ ಇಲ್ಲದೆ ಕೆಲ ವೊಂದು ಉತ್ತೇಜನಕಾರಿ ಔಷಧಗಳ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಕರೆ ಮಾಡಿ ದೂರಿದರು. ನಗರದ ಕೆಲವು ಸಾಕುನಾಯಿಗಳನ್ನು ರಸ್ತೆಯಲ್ಲೇ ಮಲ ವಿಸರ್ಜನೆ ಮಾಡಲಾಗುತ್ತಿದೆ ಮತ್ತು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಡ ಕುದ್ರುವಿನಲ್ಲಿ ನೆಲೆಸಿರುವ ಉತ್ತರ ಭಾರತೀಯರು ಪೂರ್ವಾಪರ ವಿಚಾರಿಸುವ ಬಗ್ಗೆ ಸ್ಥಳೀಯರೊಬ್ಬರು ಕರೆ ಮಾಡಿ ಮನವಿ ಮಾಡಿ ದರು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಎಸ್ಪಿ ಹೇಳಿದರು.
ಮೀಟರ್ ಬಡ್ಡಿ ವಿರುದ್ಧ ಕ್ರಮ: ಮೀಟರ್ ಬಡ್ಡಿಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ಇದೇ ರೀತಿ ಬೇರೆ ಕಡೆಗಳಿಂದ ದೂರು ಬಂದರೆ ಬಡ್ಡಿ ವ್ಯವಹಾರ ನಡೆಸುವವರನ್ನು ಬಂಧಿಸಲಾಗುವುದು ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದರು.
ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಬಸ್ ಏಜೆಂಟರು ಬಡ್ಡಿ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಮತ್ತು ಮಟ್ಕಾ ಚಟುವಟಿಕೆ ನಡೆಸುತ್ತಿರುವುದಾಗಿ ಕುಂದಾಪುರ ಸಾರ್ವಜನಿಕರೊಬ್ಬರು ಕರೆ ಮಾಡಿ ತಿಳಿಸಿದರು. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡುವ ಬಗ್ಗೆ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಬಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ಸಲಹೆ ನೀಡಿದರು.
ಮೊಬೈಲ್ ಸಂದೇಶದ ಮೂಲಕ ವಂಚಿಸುವ ಜಾಲದ ವಿರುದ್ಧ ದೂರಿದ ಉಡುಪಿಯ ಸಾರ್ವಜನಿಕರೊಬ್ಬರು, ವಂಚಕರು ಅಂಚೆಯಲ್ಲಿ ಕಳುಹಿಸಿದ ಗಿಫ್ಟ್‌ನ್ನು ಸ್ವೀಕರಿಸಲು ನಿರಾಕರಿಸಿದಕ್ಕೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುವ ಬಗ್ಗೆ ದೂರಿದರು. ಕರೆ ಮಾಡಿದ ಮೊಬೈಲ್ ನಂಬರ್ ವಿರುದ್ಧ ಠಾಣೆಗೆ ಬಂದು ದೂರು ನೀಡಿದರೆ ಕ್ರಮ ಜರಗಿಸಲಾಗುವುು ಎಂದು ಎಸ್ಪಿ ಭರವಸೆ ನೀಡಿದರು.
ಒಟ್ಟು 24 ದೂರಿನ ಕರೆಗಳು: ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಮಣಿಪಾಲ ಹಾಗೂ ಬೇರೆ ಬೇರೆ ಕಡೆಗಳಿಗೆ ಸರಕಾರಿ ಬಸ್ ಸೌಕರ್ಯ ಒದಗಿಸಬೇಕೆಂದು ಕರೆ ಮಾಡಿ ಮನವಿ ಮಾಡಿದರು. ಈ ಬಗ್ಗೆ ರಸ್ತೆ ಸಾರಿಗೆ ಪ್ರಾಧಿಕಾರಕ್ಕೆ ಪತ್ರ ಬರೆಯುವುದಾಗಿ ಎಸ್ಪಿ ತಿಳಿಸಿದರು. ಹೆಬ್ರಿ -ಸಂತೆಕಟ್ಟೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಹಣ ತೆಗೆದುಕೊಂಡು ಟಿಕೆಟ್ ಕೊಡದ ಬಗ್ಗೆ ಸಾರ್ವಜನಿಕರು ದೂರಿದರು.
ಮಣಿಪಾಲದಲ್ಲಿ ಕೆಲವೊಂದು ಹೊಟೇಲುಗಳು ಬೆಳಗ್ಗೆ ನಾಲ್ಕು ಗಂಟೆಯ ವರೆಗೂ ತೆರೆದಿರುತ್ತದೆ. ಆದರೆ ಪೊಲೀಸರು ಗೂಡಂಗಡಿಗಳನ್ನು ರಾತ್ರಿ 11 ಗಂಟೆಗೆ ಬಂದ್ ಮಾಡಿಸುತ್ತಾರೆ ಎಂಬ ದೂರಿನ ಕರೆ ಬಂತು. ಪರ್ಕಳ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಿರುಗಿಸುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಬಗ್ಗೆ ಪೊಲೀಸರನ್ನು ನಿಯೋಜಿಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಬ್ರಹ್ಮಾವರ ಬಾರ್ಕೂರು ಬಳಿ ಅಕ್ರಮ ಮರಳುಗಾರಿಕೆ, ಕಾಕಳ ನಗರ ಪೊಲೀಸ್ ಠಾಣೆಯ ಮನೆಯಲ್ಲಿ ಇಸ್ಪೀಟ್ ಜುಗಾರಿ, ಬ್ರಹ್ಮಾವರ ಹಾಗೂ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಉಡುಪಿ ಕಾರ್ಪೊರೇಶನ್ ಬ್ಯಾಂಕ್ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್, ಮಲ್ಪೆ ಕುಡುಕರ ಹಾವಳಿ ಮತ್ತು ಗಾಂಜಾ ಸೇವನೆ, ಬ್ರಹ್ಮಾವರ ಸೋಮವಾರ ಸಂತೆಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಸಂಚಾರಕ್ಕೆ ತೊಂದರೆ ಮತ್ತು ಉಡುಪಿ ಕಲ್ಯಾಣಪುರದಲ್ಲಿ ಮರಳುಗಾರಿಕೆ ಮಾಡುವ ದೋಣಿಗಳಿಗೆ ಜಿಪಿಎಸ್ ಅಳವಡಿಸಿರುವ ಕುರಿತ ದೂರುಗಳು ಬಂದವು. ಹೀಗೆ ಇಂದು ಒಟ್ಟು 24 ಕರೆ ಗಳು ಬಂದವು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ದರೋಡೆ ಪ್ರಕರಣ: ತನಿಖೆ ಮುಂದುವರಿಕೆ
ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಚಿನ್ನಾ ಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಪಣವೆ ರೈಲ್ವೆ ಪೊಲೀಸರ ಮತ್ತು ಮುಂಬೈ ಸಿಟಿ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದರು.
ಫೋನ್ ಇನ್ ಕಾರ್ಯಕ್ರಮದ ಪರಿಣಾಮವಾಗಿ ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 7 ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು, ಎರಡು ಜೂಜಾಟ ಪ್ರಕರಣದಲ್ಲಿ 14 ಮಂದಿಯನ್ನು, ಮೂರು ಗಾಂಜಾ ಸೇವನೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಒಟ್ಟು 990 ಹೆಲ್ಮೆಟ್ ಧರಿಸದೆ ಕಾನೂನು ಉಲ್ಲಂಘಿಸಿದ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.







