ಸೂಕಿ ಭಾವಚಿತ್ರ ತೆರವುಗೊಳಿಸಿದ ಆಕ್ಸ್‌ಫರ್ಡ್ ವಿವಿ ಕಾಲೇಜ್
ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಗಳ ನರಮೇಧದ ವಿರುದ್ಧ ಪ್ರತಿಭಟನೆ

ಲಂಡನ್,ಸೆ.30: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಪದವಿ ಶಿಕ್ಷಣ ಪಡೆದಿದ್ದ ಆಕ್ಸ್‌ಫರ್ಡ್ ವಿವಿಯ ಕಾಲೇಜೊಂದು ತನ್ನ ಮುಖ್ಯಪ್ರವೇಶ ದ್ವಾರದ ಬಳಿ ಇರಿಸಿದ್ದ ಆಕೆಯ ಭಾವಚಿತ್ರವನ್ನು ತೆಗೆದುಹಾಕಿದೆ. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸೂ ಕಿ ಅವರ ನಿರ್ಲಕ್ಷ್ಯ ತಾಳಿರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸ್‌ಫರ್ಡ್ ವಿ.ವಿ. ಈ ಕ್ರಮ ಕೈಗೊಂಡಿದೆಯೆನ್ನಲಾಗಿದೆ.
1967ರಲ್ಲಿ ಆಕ್ಸ್‌ಫರ್ಡ್ ವಿವಿಯ ಅಧೀನದ ಸೈಂಟ್ ಹ್ಯೂಗ್ಸ್ ಕಾಲೇಜ್‌ನಿಂದ ಸೂಕಿ ಪದವಿ ವಿದ್ಯಾರ್ಥಿನಿಯಾಗಿದ್ದರು. 1999ರಿಂದೀಚೆಗೆ ಅವರ ಭಾವಚಿತ್ರವು ಕಾಲೇಜ್‌ನ ಪ್ರವೇಶ ದ್ವಾರದ ಬಳಿ ಪ್ರದರ್ಶಿತವಗುತ್ತಿತ್ತು. 1997 ಕಲಾವಿದ ಚೆನ್ ಯಾನಿಂಗ್ ಬರೆದಿದ್ದ ಈ ಭಾವಚಿತ್ರವು ಸೂ ಕಿ ಅವರ ಪತಿ, ಆಕ್ಸ್‌ಫರ್ಡ್ ಪ್ರೊಫೆಸರ್ ಆಹಗಿಚೆನ್ ಯಾನಿಂಗ್ ಬಳಿಯಿತ್ತು. ಅವರ ನಿಧನದ ಬಳಿಕ ಈ ಪೇಂಟಿಂಗನ್ನು ಆಕ್ಸ್‌ಫರ್ಡ್ ವಿವಿಗೆ ನೀಡಲಾಗಿತ್ತು.
ಇದೀಗ ಈ ಭಾವಚಿತ್ರವನ್ನು ಸಂಗ್ರಹಗಾರದಲ್ಲಿಸಲಾಗಿದೆ ಎಂದು ಸೈಂಟ್ ಹ್ಯೂಗ್ಸ್ ಕಾಲೇಜ್‌ನ ಆಡಳಿತವು ಹೇಳಿಕೆಯೊಂದರಲ್ಲಿ ತಿಳಿಸಿದಿದೆ. ಈ ಭಾವಚಿತ್ರವನ್ನು ಕಿತ್ತುಹಾಕಲು ಕಾರಣವೇನೆಂಬ ಬಗ್ಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲವದರೂ, ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಜನಾಂಗೀಯ ನರಮೇಧವನ್ನು ತಡೆಗಟ್ಟುವಲ್ಲಿ ಸೂಕಿಯವರ ನಿಷ್ಕ್ರಿಯತೆಯನ್ನು ಪ್ರತಿಭಟಿಸಿ ಕಾಲೇಜ್ ಈ ಕ್ರಮ ಕೈಗೊಂಡಿದೆಯೆಂದು ನಂಬಲಾಗಿದೆ. ಈವರೆಗೆ ಸುಮಾರು 5 ಲಕ್ಷ ರೊಹಿಂಗ್ಯಾಗಳು ಬಾಂಗ್ಲಾ ದೇಶಕ್ಕೆ ಪಲಾಯನ ಮಾಡಿದ್ದು, ಮಹಾ ಮಾನವೀ ಯ ಬಿಕ್ಕಟ್ಟು ಸೃಷ್ಟಿಯಾಗಿದೆ.
ಸೂಕಿಯವರಿಗೆ 2012ರಲ್ಲಿ ಸೈಂಟ್ ಹ್ಯೂಗ್ಸ್ ಗೌರವ ಪದವಿಯನ್ನು ಪ್ರದಾನ ಮಾಡಿತ್ತು. ಆದರೆ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ತಾನು ಯೋಚಿಸಿಲ್ಲವೆಂದು ಕಾಲೇಜ್‌ನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.







