ರೊಹಿಂಗ್ಯ ನಿರಾಶ್ರಿತರ ದೋಣಿ ಮುಳುಗಿ 23 ಸಾವು
ಬಾಂಗ್ಲಾಗೆ ಪಲಾಯನಗೈಯುತ್ತಿದ್ದಾಗ ಜಲಸಮಾಧಿಯಾದ ದೋಣಿ

ಢಾಕಾ,ಸೆ.30: ಮ್ಯಾನ್ಮಾರ್‌ನಲ್ಲಿ ತಾಂಡವವಾಡುತ್ತಿರುವ ಜನಾಂಗೀಯ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗುತ್ತಿದ್ದ ರೊಹಿಂಗ್ಯಾಮುಸ್ಲಿಮರಿದ್ದ ದೋಣಿಯೊಂದು ಬಂಗಾಳಕೊಲ್ಲಿಯಲ್ಲಿ ಮುಳುಗಿ ಕನಿಷ್ಠ 23 ಮಂದಿ ನಿರಾಶ್ರಿತರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯ ವಲಸಿಗರ ಕುರಿತಾದ ಸಂಸ್ಥೆಯೊಂದು ಶುಕ್ರವಾರ ತಿಳಿಸಿದೆ.
ಪ್ರಕ್ಷುಬ್ದವಾಗಿದ್ದ ಕಡಲಿನಲ್ಲಿ ರೊಹಿಂಗ್ಯಾನಿರಾಶ್ರಿತರು ಬಾಂಗ್ಲಾಕ್ಕೆ ಪ್ರಯಾಣಿಸಲು ಯತ್ನಿಸುತ್ತಿದ್ದಾಗ ಅವರಿದ್ದ ದೋಣಿಯು ಬುಡಮೇಲಾಗಿ ಮುಳುಗಿತೆಂದು ಅಂತಾರಾಷ್ಟ್ರೀಯ ವಲಸೆ ಕುರಿತ ಸಂಸ್ಥೆ (ಐಓಎಂ) ತಿಳಿಸಿದೆ.
ಗುರುವಾರ ದೋಣಿದುರಂತ ಸಂಭವಿಸಿದ್ದು, ಕೆಲವೇ ತಾಸುಗಳ ಬಳಿಕ 15 ಮಂದಿ ರೊಹಿಂಗ್ಯಾ ನಿರಾಶ್ರಿತರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆಯೆಂದು ಏಜೆನ್ಸಿಯು ತಿಳಿಸಿದೆ. ಶುಕ್ರವಾರ ಬೆಳಗ್ಗೆ ಇನ್ನೂ 8 ಮೃತದೇಹಗಳು ದೊರೆತಿರುವುದಾಗಿ ಅದು ಹೇಳಿದೆ. ದೋಣಿದುರಂತದಲ್ಲಿ ಮೃತಪಟ್ಟವರಲ್ಲಿ 35 ಹಾಗೂ 49 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಹಾಗೂ ಆರು ಮಕ್ಕಳು ಸೇರಿದ್ದಾರೆಂದು ಹೇಳಿಕೆಯು ತಿಳಿಸಿದೆ.
ಸಮುದ್ರ ಪಾಲಾದ ದೋಣಿಯಲ್ಲಿದ್ದ 17 ಮಂದಿಯನ್ನು ರಕ್ಷಿಸಲಾಗಿದೆಯೆಂದು ಐಓಎಂ ತಿಳಿಸಿದೆ. ರಕ್ಷಿಸಲ್ಪಟ್ಟವರಲ್ಲಿ 10 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ದೋಣಿದುರಂತದಲ್ಲಿ ಬದುಕುಳಿದವರಿಗೆ ದಕ್ಷಿಣ ಬಾಂಗ್ಲಾದಲ್ಲಿ ಸರಕಾರದ ನೆರವಿನ ಕುಟುಪಲೊಂಗ್ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ.
ದುರಂತಕ್ಕೀಡಾದ ದೋಣಿಯಲ್ಲಿ 80 ಮಂದಿ ರೊಹಿಂಗ್ಯಗಳು ಪ್ರಯಾಣಿಸುತ್ತಿದ್ದರೆಂದು, ಬದುಕುಳಿದ ನಿರಾಶ್ರಿತನೊಬ್ಬ ತಿಳಿಸಿದ್ದಾನೆ. ಸುಮಾರು 50 ಮಂದಿ ಮಕ್ಕಳು, ತಮ್ಮ ಪಾಲಕರಿಲ್ಲದೆಯೇ ನತದೃಷ್ಟ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರೆಂದು ಆತ ಹೇಳಿದ್ದಾನೆ. ದುರಂತದಲ್ಲಿ ತನ್ನ 22 ವರ್ಷ ವಯಸ್ಸಿನ ಪತಿ, 8 ವರ್ಷದ ಪುತ್ರ ಹಾಗೂ 3 ತಿಂಗಳ ಪುತ್ರಿ ಜಲಸಮಾಧಿಯಾಗಿದ್ದಾರೆಂದು ಆತ ತಿಳಿಸಿದ್ದಾನೆ.







