ಟ್ರಂಪ್ ಪತ್ನಿಯ ಪುಸ್ತಕ ದೇಣಿಗೆ ತಿರಸ್ಕರಿಸಿದ ಗ್ರಂಥಪಾಲಕಿ
ಜನಾಂಗೀಯವಾದಿ ಸಾಹಿತ್ಯವೆಂಬ ಆರೋಪ

ವಾಶಿಂಗ್ಟನ್,ಸೆ.30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲನಿಯಾ ಅವರು ದೇಣಿಗೆಯಾಗಿ ನೀಡಿದ್ದ ಪುಸ್ತಕಗಳನ್ನು ಕ್ಯಾಲಿಫೋರ್ನಿಯಾದ ಶಾಲೆಯೊಂದು ತಿರಸ್ಕರಿಸಿದೆ. ಈ ಪುಸ್ತಕಗಳು ಜನಾಂಗೀಯವಾದಿ ಹಾಗೂ ಅನಗತ್ಯ ವಿಷಯಳನ್ನು ಒಳಗೊಂಡಿರುವುದರಿಂದ ಅವುಗಳನ್ನು ತಿರಸ್ಕರಿಸಿರುವುದಾಗಿ ಕ್ಯಾಂಬ್ರಿಜ್‌ಪೋರ್ಟ್ ಸ್ಕೂಲ್‌ನ ಗ್ರಂಥಾಲಯ ಪಾಲಕಿ ಲಿಝ್ ಫಿಪ್ಸ್ ಸೊಯಿರೊ ಶುಕ್ರವಾರ ತಿಳಿಸಿದ್ದಾರೆ.
ಮೆಲನಿಯಾ ಅವರು ಅಮೆರಿಕದ ಪ್ರತಿಯೊಂದು ರಾಜ್ಯದಲ್ಲಿರುವ ಉತ್ಕೃಷ್ಟ ಸಾಧನೆ ಮಾಡಿದ ಶಾಲೆಗಳಿಗೆ ಡಾ. ಸೆಯೂಸ್ ಬುಕ್ಸ್ ಸರಣಿಯ 10 ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದರು.
ಪುಸ್ತಕಗಳನ್ನು ಕಳುಹಿಸಿಕೊಟ್ಟಿರುವುದಕ್ಕೆ ತಾನು ಕೃತಜ್ಞಳಾಗಿರುವೆನಾದರೂ, ಅವುಗಳ ಅಗತ್ಯ ಇಲ್ಲದಿರುವುದರಿಂದ ಅವನ್ನು ವಾಪಸ್ ಕಳುಹಿಸಿರುವುದಾಗಿ ಆಕೆ ಹೇಳಿದ್ದಾರೆ.
ಡಾ.ಸೆಯೂಸ್ ಸರಣಿಯ ಪುಸ್ತಕಗಳಲ್ಲಿನ ಸಾಹಿತ್ಯ ಹಾಗೂ ಚಿತ್ರಗಳು ಜನಾಂಗೀಯವಾದವನ್ನು ಬೆಂಬಲಿಸುತ್ತವೆ ಹಾಗೂ ಅಪಾಯಕಾರಿ ಅಭಿವ್ಯಕ್ತಿಗಳಿಂದ ಕೂಡಿವೆ ಎಂದು ಫಿಪ್ಸ್ ಸೊಯೆರೊ ಹೇಳಿದ್ದಾರೆ. ಶಾಲೆಗಳಿಗೆ ಹಾಗೂ ಗ್ರಂಥಾಲಗಳಿಗೆ ಆರ್ಥಿಕ ನೆರವು ನೀಡಿಕೆ ಕುರಿತ ಟ್ರಂಪ್ ಸರಕಾರದ ನೀತಿಗಳನ್ನು ಕೂಡಾ ಸೊಯೆರೊ ಖಂಡಿಸಿದ್ದಾರೆಂದು ಯುಎಸ್‌ಎ ಟುಡೇ ಪತ್ರಿಕೆ ವರದಿ ಮಾಡಿದೆ.
‘‘ ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡೆವೊಸ್ ಅವರ ಪ್ರಮಾದಕರ ನೀತಿಗಳಿಂದಾಗಿ ಆರ್ಥಿಕ ನೆರವು ದೊರೆಯದ ಹಾಗೂ ಕಡೆಗಣಿಸಲ್ಪಟ್ಟಿರುವ ಮತ್ತು ಅವಕಾಶವಂಚಿತ ಸಮುದಾಯಗಳ ಮಕ್ಕಳಿಗೆ ನೀವು ಯಾಕೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಿಲ್ಲ’’ ಎಂದು ಲಿಝ್ ಪಿಫ್ಸ್ ಪ್ರಶ್ನಿಸಿದ್ದಾರೆ.
ಈ ಮಧ್ಯೆ ಫಿಪ್ಸ್ ಅವರ ಹೇಳಿಕೆಯಿಂದ, ಕ್ಯಾಲಿಫೋರ್ನಿಯಾ ಶಿಕ್ಷಣ ಇಲಾಖೆಯು ದೂರವುಳಿದಿದೆ. ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆಕೆಗೆ ಹಕ್ಕಿದೆ. ಆದರೆ, ಅಧಿಕೃತ ಹುದ್ದೆಯಲ್ಲಿದ್ದುಕೊಂಡು ಆಕೆ ಹಾಗೆ ಮಾಡುವಂತಿಲ್ಲ ಎಂದು ಅದು ಪ್ರತಿಕ್ರಿಯಿಸಿದೆ.
ಅಮೆರಿಕದ ಪ್ರಥಮ ಮಹಿಳೆ ದೇಣಿಗೆಯಾಗಿ ಪುಸ್ತಕಗಳನ್ನು ಹಿಂತಿರುಗಿಸಲಾಗಿರುವುದನ್ನು ಶ್ವೇತಭವನ ಖಂಡಿಸಿದೆ. ‘‘ ಕಿರಿಯ ವಿದ್ಯಾರ್ಥಿಗಳಿಗೆ ದೇಣಿಗೆಯಾಗಿ ನೀಡಿದ ಪುಸ್ತಕಗಳನ್ನು ಹಿಂತಿರುಗಿಸಿರುವುದು ದುರದೃಷ್ಟಕರ’’ ಎಂದು ಅದು ತಿಳಿಸಿದೆ.







