ಬಡವರು ಬಡತನವನ್ನು ಮೆಟ್ಟಿ ನಿಲ್ಲಬೇಕು: ಡಾ.ಗುರುರಾಜ ಕರ್ಜಗಿ
ಬೆಂಗಳೂರು, ಸೆ. 30: ಬಡತನವಿರುವುದು ಕಷ್ಟವಾದುದಲ್ಲ. ಆದರೆ,ನನಗೆ ಬಡತನವಿದೆ ಎಂದು ಕೊರಗುವುದರಿಂದ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎಂದು ವಾಗ್ಮಿ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶರಣ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಬನ್ನಿ ಬಂಗಾರ-2017 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಕಿಯೊಳಗೆ ಬಂಗಾರ ಕಾಯಿಸಿದ ಸಂದರ್ಭದಲ್ಲಿ ಅದು ಕರಗಿ ಹೇಗೆ ಹೊಸ ಹೊಳಪನ್ನು ನೀಡುತ್ತದೆಯೋ, ಬಡತನವನ್ನು ನಾವು ಧೈರ್ಯದಿಂದ ಎದುರಿಸಿದಾಗ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು. ಹುಟ್ಟಿನಿಂದ ಬಡತನ ಬಂದಿರುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಹುಟ್ಟಿಕೊಂಡಿರುತ್ತದೆ. ಹೀಗಾಗಿ, ನಾವು ಬಡವರು, ಏನೂ ಇಲ್ಲದವರು ಎಂಬ ಮನೋಭಾವ ಬಿಟ್ಟು ಶ್ರಮಪಟ್ಟು ದುಡಿಯಬೇಕು ಎಂದು ಹೇಳಿದರು.
ನಾಗರಿಕತೆ ಬದಲಾದಂತೆ ಸಂಸ್ಕೃತಿಯೂ ಬದಲಾಗಿದೆ. ಹಿಂದಿನ ಕಾಲದಲ್ಲಿ ಗ್ರಾಮಾಂತರ ಅಥವಾ ನಗರ ಪ್ರದೇಶದಲ್ಲಿ ಎಲ್ಲರೂ ಸಂಬಂಧಿಗಳ ರೀತಿಯಲ್ಲಿ ಇರುತ್ತಿದ್ದರು. ಆದರೆ, ಇಂದಿನ ನಗರ ಪ್ರದೇಶದಲ್ಲಿ ಪಕ್ಕದ ಮನೆಯವರನ್ನು ನೀವು ಹೇಗಿದ್ದೀರಾ ಎಂದು ಮಾತನಾಡುವುದಿಲ್ಲ. ಆದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಇಂದಿಗೂ ಸಂಬಂಧಗಳನ್ನು, ಹಿಂದಿನ ಪ್ರೀತಿ, ಸ್ನೇಹದ ಪರಂಪರೆಯನ್ನು ಬಿಟ್ಟಿಲ್ಲ ಎಂದು ಬಣ್ಣಿಸಿದರು.
ಪ್ರಕೃತಿ ಮತ್ತು ಸಂಸ್ಕೃತಿಯ ನಡುವೆ ಹತ್ತಿರವಾದ ಸಂಬಂಧವಿದೆ. ಅಕ್ಕಿ, ಹತ್ತಿ, ಬನ್ನಿ ಪ್ರಕೃತಿಯಾದರೆ ವಿಭಿನ್ನ ರೀತಿಯ ಅಡುಗೆಗಳು, ಬಟ್ಟೆಗಳು ಸಂಸ್ಕೃತಿಯಾಗಿದೆ. ಹೀಗಾಗಿ, ಪ್ರತಿಯೊಬ್ಬರೂ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಕಾಪಾಡಬೇಕಾದ ಜವಾಬ್ದಾರಿ ಇದೆ ಎಂದ ಅವರು, ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ನೀಡಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಸ್ಕಾರವಿಲ್ಲದ, ಮಾನವೀಯತೆ ಇಲ್ಲದ ಪೀಳಿಗೆ ನಿರ್ಮಾಣವಾಗಬಹುದು ಎಂದು ಎಚ್ಚರಿಕೆ ನೀಡಿದರು.
ಡಾ.ಎಚ್.ಎಂ.ಪ್ರಸನ್ನ ಮಾತನಾಡಿ, ಉತ್ತರ ಕರ್ನಾಟಕದ ಭಾಷೆ ಒರಟಾದರೂ, ಅಲ್ಲಿನ ಜನರ ಹೃದಯವಂತಿಕೆ ವಿಶಾಲವಾದುದು. ಕನ್ನಡ ಸಾಹಿತ್ಯಕ್ಕೆ ಉತ್ತರ ಕರ್ನಾಟಕದ ಅನೇಕರು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದ ಅವರು, ಇಂದಿನ ರಾಜಕಾರಣ ಹೊಲಸಾಗಿದೆ. ಅದನ್ನು ಸ್ವಚ್ಛ ಮಾಡಲು ಯುವ ಜನತೆ ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಸಾಂಬ್ರಾಣಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.







