ಕೊರಂಗ್ರಪಾಡಿ ದೇವಳಕ್ಕೆ ನುಗ್ಗಿ ಕಳವು
ಉಡುಪಿ, ಸೆ.30: ಕೊರಂಗ್ರಪಾಡಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಗಾಣಿಗ ಸೆ.28ರಂದು ಸಂಜೆ 7.30 ಗಂಟೆಗೆ ಗರ್ಭಗುಡಿಗೆ ಹಾಗೂ ಸುತ್ತಮುತ್ತಲಿನ ಇತರ ಗುಡಿಗಳಿಗೆ ಬೀಗ ಹಾಕಿ ಹೋಗಿದ್ದು, ಸೆ.29ರಂದು ಬೆಳಗ್ಗೆ 6ಗಂಟೆಗೆ ದೇವಸ್ಥಾನಕ್ಕೆ ಬಂದು ನೋಡುವಾಗ ಕಳವಾಗಿರುವು ಬೆಳಕಿಗೆ ಬಂತೆನ್ನಲಾಗಿದೆ.
ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು ವಾಸುಕಿ ಸುಬ್ರಹ್ಮಣ್ಯ ದೇವರ ಬೆಳ್ಳಿಯ ಮುಖವಾಡ ಹಾಗೂ ಯಕ್ಷಿಣಿ ದೇವರ ಬೆಳ್ಳಿಯ ಮುಖ ವಾಡ, ಮುಖ್ಯ ಪ್ರಾಣ ದೇವರ ಬೆಳ್ಳಿಯ ಮಣಿಮಾಲೆ, ಖಡ್ಗೇಶ್ವರಿ ದೇವಿಯ ಐದು ತಾಳಿಯ ಗುಂಡುಗಳಿರುವ ಚಿನ್ನದ ಕರಿಮಣಿ ಸರ ಹಾಗೂ ಬೆಳ್ಳಿಯ ಕವಚ ಇರುವ ಶಂಖವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳವಾದ 4.70ಕೆಜಿ ತೂಕದ ಬೆಳ್ಳಿಯ ಹಾಗೂ ಸುಮಾರು 2 ಪವನ್ ತೂಕದ ಚಿನ್ನದ ಅಭರಣಗಳ ಒಟ್ಟು ಮೌಲ್ಯ ಸುಮಾರು 2ಲಕ್ಷರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





