ಅಮೆರಿಕದ ಆರೋಗ್ಯ ಕಾರ್ಯದರ್ಶಿ ಟಾಮ್ ಪ್ರೈಸ್ ರಾಜೀನಾಮೆ

ವಾಶಿಂಗ್ಟನ್,ಸೆ.30: ತನ್ನ ಅಧಿಕೃತ ಪ್ರವಾಸಕ್ಕಾಗಿ ದುಬಾರಿಯಾದ ಖಾಸಗಿ ವಿಮಾನಗಳನ್ನು ಬಳಸಿದ್ದಕ್ಕಾಗಿ ಭಾರೀ ವಿವಾದಕ್ಕೆ ತುತ್ತಾಗಿದ್ದ ಅಮೆರಿಕದ ಆರೋಗ್ಯ ಕಾರ್ಯದರ್ಶಿ ಟಾಮ್ ಪ್ರೈಸ್ ಶುಕ್ರವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಸಂಭಾವ್ಯ ಉತ್ತರಾಧಿಕಾರಿಯಾಗಿ ಇಬ್ಬರು ಭಾರತೀಯರ ಹೆಸರುಗಳು ಕೇಳಿಬರುತ್ತಿವೆಯೆಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿಗಿನ ಕೆಲವು ಘಟನೆಗಳು ತನ್ನನ್ನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದರಿಂದ ವಿಚಲಿತನನ್ನಾಗಿ ಮಾಡಿರುವುದಾಗಿ 62 ವರ್ಷದ ಪ್ರೈಸ್ ಗುರುವಾರ ತಿಳಿಸಿದ್ದರು.
ರಾಷ್ಟ್ರೀಯ ಭದ್ರತಾ ವಿಷಯಗಳನ್ನು ನಿರ್ವಹಿಸುವವರನ್ನು ಹೊರತುಪಡಿಸಿ ಉಳಿದ ಸರಕಾರಿ ಹುದ್ದೆಗಳನ್ನು ಹೊಂದಿರುವವರು ಕೆಲಸದ ನಿಮಿತ್ತ ಪ್ರಯಾಣಗಳಿಗಾಗಿ ವಾಣಿಜ್ಯ ವಿಮಾನಗಳನ್ನೇ ಬಳಸಬೇಕಾಗುತ್ತದೆ. ಆದರೆ ಪ್ರೈಸ್ ಖಾಸಗಿ ವಿಮಾನವನ್ನೇ ಬಳಸುತ್ತಿದ್ದುದರಿಂದ, ಅವರ ವಿಮಾನಯಾನದ ವೆಚ್ಚವು 1 ದಶಲಕ್ಷ ಡಾಲರ್ ದಾಟಿರುವುದಾಗಿ ಅಮೆರಿಕದ ಮಾಧ್ಯಮಗಳು ಬಹಿರಂಗಪಡಿಸಿದ್ದವು.
ಪ್ರೈಸ್ ಅವರ ರಾಜೀನಾಮೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವೀಕರಿಸಿದ್ದಾರೆಂದು ಶ್ವೇತಭವನದ ಮೂಲಗಳು ತಿಳಿಸಿವೆ. ಸದ್ಯಕ್ಕೆ ಡಾ.ಜೆ.ರೈಟ್ ಅವರು ಹಂಗಾಮಿ ಆರೋಗ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಅದು ಹೇಳಿದೆ.
ಪ್ರೈಸ್ ರಾಜೀನಾಮೆಯಿಂದ ತೆರವಾಗಿರುವ ಆರೋಗ್ಯ ಕಾರ್ಯದರ್ಶಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಭಾರತೀಯರಾದ ಸೀಮಾ ವರ್ಮಾ ಹಾಗೂ ಬಾಬಿ ಜಿಂದಾಲ್ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.
ಲೂಸಿಯಾನ ರಾಜ್ಯದ ಮಾಜಿ ಗವರ್ನರ್ ಆಗಿರುವ ಜಿಂದಾಲ್, ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದರು ಆದರೆ ಕಳೆದ ವರ್ಷ ನಡೆದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಸ್ಪರ್ಧೆಯಲ್ಲಿ ಜಿಂದಾಲ್ ಅವರು ಟ್ರಂಪ್‌ರನ್ನು ಕಟುವಾಗಿ ಟೀಕಿಸಿದ್ದರು.
ಇನ್ನೋರ್ವ ಸಂಭಾವ್ಯ ಅಭ್ಯರ್ಥಿಯಾಗಿರುವ ಸುನೀತಾ ವರ್ಮಾ ಅವರು ಅಮೆರಿಕದ ಆರೋಗ್ಯ ವಿಮಾ ಯೋಜನೆ ಒಬಾಮಕೇರ್‌ನ್ನು ರದ್ದುಪಡಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಂದು ವೇಳೆ ವರ್ಮಾ ಆರೋಗ್ಯ ಕಾರ್ಯದರ್ಶಿಯಾಗಿ ನೇಮಕಗೊಂಡರೆ, ಟ್ರಂಪ್ ಸಂಪುಟಕ್ಕೆ ನಿಕ್ಕಿ ಹಾಲೆ ನಂತರ ನೇಮಕಗೊಂಡ ಭಾರತೀಯ ಮೂಲದ ಅಮೆರಿಕನ್ ಮಹಿಳೆಯೆನಿಸಿಕೊಳ್ಳಲಿದ್ದಾರೆ.







