ಮಡಿಕೇರಿ : ಗಮನ ಸೆಳೆದ ಆಯುಧ ಪೂಜಾ ಕಾರ್ಯಕ್ರಮಗಳು

ಮಡಿಕೇರಿ,ಸೆ.30 : ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶುಕ್ರವಾರದಂದು ಆಯುಧ ಪೂಜಾ ಉತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಂತೆ ವಾಹನಗಳ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ನಗರದ ವಿವಿಧ ದೇಗುಲಗಳಲ್ಲಿ ಬೆಳಗ್ಗಿನಿಂದಲೆ ವಾಹನಗಳಿಗೆ ಪೂಜೆ ಸಲ್ಲಿಸುವ ಕಾರ್ಯದಲ್ಲಿ ಸಾರ್ವಜನಿಕರು ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಂಡುದು ಕಂಡು ಬರುತ್ತಿತ್ತು. ಉತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದುದಲ್ಲದೆ, ಪೂಜಾ ಸಾಮಗ್ರಿ, ಹೂವಿನ ಮಾರಾಟ ಜೋರಾಗಿ ನಡೆಯುತ್ತಿತ್ತು.
ಸಂಜೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯುಧ ಪೂಜೆಯ ಹಿನ್ನೆಲೆಯಲ್ಲಿ ಆಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ದುಷ್ಟ ಸಂಹಾರ- ಶಿಷ್ಟ ರಕ್ಷಣೆಯ ಪ್ರತೀಕವಾಗಿ ಆಚರಿಸಲ್ಪಡುವ ನವರಾತ್ರಿ ಉತ್ಸವ ಸಂಭ್ರಮದ ಹಬ್ಬವಾಗಿದೆ ಎಂದರು.
ಜಾತಿ ಮತ ಧರ್ಮಗಳನ್ನು ಮೀರಿ ದಸರಾ ಉತ್ಸವವನ್ನು ಸರ್ವ ಧರ್ಮೀಯರು ಪ್ರೀತಿ ವಿಶ್ವಾಸಗಳಿಂದ ಜನೋತ್ಸವವನ್ನಾಗಿ ಆಚರಿಸುತ್ತಿದ್ದು, ಇಂತಹ ಉತ್ಸವಕ್ಕೆ ಅನುದಾನದ ಕೊರತೆ ಆಗಬಾರದೆಂದು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಸರಾ ಸಮಿತಿಯ ಹಾಗೂ ನಗರಸಭಾ ಉಪಾಧ್ಯಕ್ಷರಾದ ಟಿ.ಎಸ್. ಪ್ರಕಾಶ್, ಕೊಡಗು ಸೇರಿದಂತೆ ದೇಶಾದ್ಯಂತ ಅಶಾಂತಿಯನ್ನು ಹರಡಲೆತ್ನಿಸುವ ದುಷ್ಟ ಶಕ್ತಿಗಳಿದ್ದು, ಇಂತಹ ಶಕ್ತಿಯನ್ನು ಧಮನಿಸುವ ಮೂಲಕ ಭಾರತಮಾತೆಯ ಉಳಿವಿಗಾಗಿ ಶ್ರಮಿಸಬೇಕೆಂದರು.
ದಸರಾ ಸಮಿತಿಯ ಗೌರವಾಧ್ಯಕ್ಷ ಎಂ.ಜಿ.ಸತೀಶ್ ಪೈ ಮತನಾಡಿ, ಮಡಿಕೇರಿ ದಸರಾ ಹಿಂದೆ ಪಲ್ಲಕಿಯ ಮೂಲಕ ನಡೆಯುತ್ತಿತ್ತು, ಬಳಿಕ ಹೂವಿನ ಮಂಟಪವಾಗಿ ಪರಿವರ್ತನೆಗೊಂಡು ಇಂದು ಆಧುನಿಕ ಶೈಲಿಯಲ್ಲಿ ಚಲನ-ವಲನಗಳಿಂದ ಮೇಳೈಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ದಶ ಮಂಟಪಗಳ ಸಮಿತಿಯ ಅಧ್ಯಕ್ಷ ಸತೀಶ್ ಧರ್ಮಪ್ಪ ಮಾತನಾಡಿದರು. ವೇದಿಕೆಯಲ್ಲಿ ದಸರಾ ಸಮಿತಿಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಆಯುಕ್ತೆ ಶುಭಾ, ಪ್ರಧಾನ ಕಾರ್ಯದರ್ಶಿ ಚುಮ್ಮಿದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ ಉಪಸ್ಥಿತರಿದ್ದರು.ಆರಂಭದಲ್ಲಿ ದಸರಾ ಸಮಿತಿಯ ಗೌರವಾಧ್ಯಕ್ಷ ಬೈ.ಶ್ರೀ. ಪ್ರಕಾಶ್ ಸ್ವಾಗತಿಸಿದರು, ದಸರಾ ಉಪ ಸಮಿತಿಯ ಪದಾಧಿಕಾರಿ ಕಾನೆಹಿತ್ಲು ಮೊಣ್ಣಪ್ಪ ವಂದಿಸಿದರು.
ವಾಹನ ಅಲಂಕಾರ-ಆಯುಧ ಪೂಜಾ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿತ ವಾಹನಗಳ ಅಲಂಕಾರ ಸ್ಪರ್ಧೆ ಅತ್ಯಾಕರ್ಷಕವಾಗಿ ಮೂಡಿ ಬಂದಿತು. ಸೈಕಲ್‍ನಿಂದ ಹಿಡಿದು ಭಾರೀ ವಾಹನಗಳು ಅತ್ಯಾಕರ್ಷಕವಾಗಿ ಅಲಂಕರಿಸಲ್ಪಟ್ಟು, ದೇವಾನುದೇವತೆಗಳ ವಿಗ್ರಹಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದವು. ಆಯುಧಪೂಜೆ, ದಸರಾಕ್ಕೆ ಸ್ಥಳೀಯ ಕಲಾವಿದರ ಸಂಗೀತ, ನೃತ್ಯಗಳ ಮೆರುಗು. ದಸರಾ ದಿನ ಉಷಾ ಕೋಕಿಲ ಸಂಗೀತ ರಸಮಂಜರಿ.
ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ಆಯುಧಪೂಜಾ ದಿನ ನಡೆದ ಮಡಿಕೇರಿಯ ಲೈಟ್-ಕ್ಯಾಮರ-ಡ್ಯಾನ್ಸ್ ಹೌಸ್ ತಂಡದಿಂದ - ಹಿಪ್ ಅಪ್ ಡ್ಯಾನ್ಸ್, ಆಟಿಟ್ಯೂಡ್ ಡ್ಯಾನ್ಸ್ ತಂಡದಿಂದ ಡ್ಯಾನ್ಸ್ ಫೆಸ್ಟ್, ಮಡಿಕೇರಿಯ ಕಲಾಬಳಗ ತಂಡದಿಂದ ವೀರಚರಿತೆ ನೃತ್ಯ ರೂಪಕ, ಗೋವಿಂದ ರಾಜು, ವಿನಯ್, ದೇವೇಂದ್ರ ಪತ್ತರ್, ಸುವೇದಿತಾ, ನೀಶ್ಮಾ ಜಗದೀಶ್ ಅವರಿಂದ ವೈವಿಧ್ಯಮಯ ಗೀತೆಗಳ ಪ್ರಸ್ತುತಿ ಕಲಾಭಿಮಾನಿಗಳನ್ನು ಆಕರ್ಷಿಸಿತು. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದಿಂದ ನೃತ್ಯ, ಬೆಂಗಳೂರಿನ 'ಡಿ' ಕಂಪನಿಯಿಂದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ಆಯುಧಪೂಜಾ ಸಮಾರಂಭದ ಆಕರ್ಷಣೆಯಾಗಿತ್ತು.







