ಐತಿಹಾಸಿಕ ಮಡಿಕೇರಿ ದಸರಾಕ್ಕೆ ವೈಭವದ ತೆರೆ : ಆಕರ್ಷಿಸಿದ ದಶಮಂಟಪಗಳು
ಮಡಿಕೇರಿ, ಸೆ.30 :ದುಷ್ಟ ಸಂಹಾರ ಶಿಷ್ಟ ರಕ್ಷಣೆಯ ಸಂದೇಶ ಸಾರುವ ಐತಿಹಾಸಿಕ ಮಡಿಕೇರಿ ದಸರಾಕ್ಕೆ ದಶಮಂಟಪಗಳ ಭವ್ಯ ಶೋಭಾಯಾತ್ರೆಯೊಂದಿಗೆ ವೈಭವದ ತೆರೆ ಬಿದ್ದಿದೆ. ವಿದ್ಯುತ್ ಅಲಂಕೃತ ಆಕರ್ಷಕ ಮಂಟಪಗಳಿಗೆ ಸಾವಿರಾರು ಜನರು ಸಾಕ್ಷಿಯಾದರು.
ನಗರದ ಪೇಟೆ ಶ್ರೀರಾಮಮಂದಿರ ದೇವಾಲಯದ ಆಕರ್ಷಕ ಮಂಟಪಕ್ಕೆ ಚಾಲನೆ ನೀಡುವ ಮೂಲಕ ಶೋಭಾಯಾತ್ರೆ ಆರಂಭಗೊಂಡಿತು. ಒಂದೂವರೆ ಶತಮಾನದ ಭವ್ಯ ಇತಿಹಾಸ ಹೊಂದಿರುವ ಪೇಟೆ ಶ್ರೀರಾಮಮಂದಿರದ ಮಂಟಪ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಆರಂಭಗೊಂಡು ನಾಲ್ಕು ಶಕ್ತಿ ದೇವತೆಗಳ ದೇಗುಲಕ್ಕೆ ತೆರಳುವ ಮೂಲಕ ಅಲ್ಲಿನ ಮಂಟಪಗಳ ಮೆರವಣಿಗೆಗೂ ಚಾಲನೆ ದೊರೆಯಿತು.
ವಿಜಯದಶಮಿಯ ದಿನವಾದ ಶನಿವಾರ ತುಂತುರು ಮಳೆಯಾದರೂ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಶಮಂಟಪಗಳ ವೈಭವವನ್ನು ವೀಕ್ಷಿಸಿದರು. ದೇಶ, ವಿದೇಶದ ಪ್ರವಾಸಿಗರು ಕೂಡ ಮಡಿಕೇರಿ ದಸರಾದ ಸಮಾರೋಪ ಸಮಾರಂಭಗಳಿಗೆ ಸಾಕ್ಷಿಯಾದರು.
ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್‍ನ್ನು ಏರ್ಪಡಿಸಿತ್ತು. ರಕ್ಷಣೆಯ ಉಸ್ತುವಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮತ್ತು ಡಿವೈಎಸ್ಪಿ ಸುಂದರ್ ರಾಜ್ ನಿರ್ವಹಿಸಿದರು.







